Advertisement

Koppal; ಮರುಕುಂಬಿ ಪ್ರಕರಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

08:28 PM Oct 24, 2024 | Team Udayavani |

ಕೊಪ್ಪಳ: ಗಂಗಾವತಿ ತಾಲೂಕಿನ ಮರುಕುಂಬಿ ಅಸ್ಪೃಶ್ಯತೆ ಪ್ರಕರಣದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಸಿ ಅವರು 101 ಅಪರಾಧಿಗಳಿಗೂ ಶಿಕ್ಷೆ ವಿಧಿಸಿ ಗುರುವಾರ(ಅ24) ತೀರ್ಪು ನೀಡಿದ್ದು, ಇವರಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ,3 ಅಪರಾಧಿಗಳಿಗೆ 5 ವರ್ಷಗಳ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Advertisement

ನ್ಯಾಯಾಧೀಶರ ಈ ತೀರ್ಪು ದೌರ್ಜನ್ಯಕ್ಕೆ ಒಳಗಾಗಿದ್ದ ಪರಿಶಿಷ್ಟರಿಗೆ (ದಲಿತರಿಗೆ) ನ್ಯಾಯ ದೊರೆತಂತಾಗಿದೆಯಲ್ಲದೇ  ಈ ಪ್ರಕರಣ ದೇಶದ ಗಮನ ಸೆಳೆದಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ2014 ರಲ್ಲಿ ಹೋಟೆಲ್ ಹಾಗೂ ಕ್ಷೌರದಂಗಡಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸವರ್ಣೀಯರು ದಲಿತರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಕುರಿತು ಪ್ರಗತಿಪರ ಸಂಘಟನೆಗಳು ಬಹು ದೊಡ್ಡ ಹೋರಾಟ ನಡೆಸಿ ನೊಂದವರಿಗೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದ್ದರು.ಈ ಪ್ರಕರಣ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತಲ್ಲದೇ ನೊಂದವರಿಗೆ ನ್ಯಾಯ ಕೊಡಬೇಕು ಎಂದೆನ್ನುವ ಒತ್ತಾಯವೂ ಸರ್ಕಾರದ ಮಟ್ಟದಲ್ಲಿ ಕೇಳಿ ಬಂದಿತ್ತು.ಗಂಗಾವತಿ ನ್ಯಾಯಾಲಯದಿಂದ ಜಿಲ್ಲಾ ನ್ಯಾಯಾಲಯದ ವರೆಗೂ ಪ್ರಕರಣದ ವಿಚಾರಣೆ ಸುದೀರ್ಘವಾಗಿ ನಡೆಯಿತು. ಆರಂಭದಲ್ಲಿ ಈ ಪ್ರಕರಣದಲ್ಲಿ ಗಂಗಾವತಿ ಪೊಲೀಸರು 117 ಜನರ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಿ(ಚಾರ್ಜ್‌ಶೀಟ್) ಸಲ್ಲಿಸಿದ್ದರು.

ಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಕೋರ್ಟ್‌ನಲ್ಲಿ101 ಜನರ ಮೇಲೆ ಪೂರಕ ದಾಖಲೆಗಳು ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಚಂದ್ರಶೇಖರ ಅವರು 101 ಆರೋಪಿಗಳು ಅಪರಾಧಿಗಳು ಎಂದು ಕಳೆದ ಕೆಲವು ದಿನದ ಹಿಂದಷ್ಟೇ ತೀರ್ಪು ಪ್ರಕಟಿಸಿದ್ದರು. ಆದರೆ ಈ ಅಪರಾಧಿಗಳಿಗೆ ಆಗ ಏಷ್ಟು ಪ್ರಮಾಣದ ಶಿಕ್ಷೆ ಎಂದು ಪ್ರಕಟಿಸಿರಲಿಲ್ಲ. ಗುರುವಾರಕ್ಕೆ ಶಿಕ್ಷೆ ಪ್ರಮಾಣದ ತೀರ್ಪು ಕಾಯ್ದಿರಿಸಿದ್ದರು. ನ್ಯಾಯಾಧೀಶರು 101 ಜನರು ದೋಷಿಗಳು ಎಂದು ತೀರ್ಪು ನೀಡಿದ ಬೆನ್ನಲ್ಲೆ ಗಂಗಾವತಿ ಪೊಲೀಸರು 101 ಅಪರಾಧಿಗಳನ್ನು ಬಂಧಿಸಿ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಗುರುವಾರ ನ್ಯಾಯಾಧೀಶರು 101 ಜನರಿಗೆ ಶಿಕ್ಷೆ ಪ್ರಕಟಿಸಿದ್ದು, ಇವರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ಮತ್ತು 3 ಜನರು ಎಸ್‌ಸಿ, ಎಸ್‌ಟಿ ಜಾತಿಯಲ್ಲಿ ಬರುವುದರಿಂದ ಎಸ್‌ಸಿ, ಎಸ್‌ಟಿ ಕಾಯ್ದೆಯು ಇವರಿಗೆ ಅನ್ವಯವಾಗಲ್ಲ ಎಂಬ ಕಾರಣ ಹಾಗೂ ಇವರು ಗಲಭೆಗೆ ಹಬ್ಬಿಸಿದ್ದಾರೆಂಬ ಕಾರಣಕ್ಕೆ ನ್ಯಾಯಾಧೀಶರು ಈ ಮೂವರಿಗೆ 5 ವರ್ಷಗಳ ಶಿಕ್ಷೆ ಹಾಗೂ ದಂಡ ಪ್ರಮಾಣ ವಿಧಿಸಿ ಶಿಕ್ಷೆಯ ಪ್ರಮಾಣದ ತೀರ್ಪನ್ನು ಗುರುವಾರ ಪ್ರಕಟಿಸಿದ್ದಾರೆ. 10 ಆರೋಪಿಗಳ ವಿರುದ್ದ ಕೋರ್ಟ್‌ನಲ್ಲಿ ಆರೋಪ ಸಾಬೀತಾಗಿರಲಿಲ್ಲ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕಿ ಅಪರ್ಣಾ ಬಂಡಿ ಅವರು ಸುದೀರ್ಘ ವಾದ ಮಂಡಿಸಿದ್ದಾರೆ.

Advertisement

ಜಾಮೀನಿನ ಮೇಲೆ ಇದ್ದವರು ವಶಕ್ಕೆ
ಮರಕುಂಬಿ ಅಸ್ಪೃಶ್ಯತೆ ಪ್ರಕರಣದಲ್ಲಿ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿಯೇ ಕೆಲವು ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗಡೆಯಿದ್ದರು. ಪ್ರಕರಣದಲ್ಲಿ ಕೆಲವರು ವಿಚಾರಣೆ ಹಂತದಲ್ಲಿಯೇ ಮೃತಪಟ್ಟಿದ್ದಾರೆ. ನ್ಯಾಯಾಧೀಶರು ಈಚೆಗೆ ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಗಂಗಾವತಿ ಪೊಲೀಸರು ಜಾಮೀನಿನ ಮೇಲೆ ಇದ್ದ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದು ಜೈಲಿಗೆ ಕಳಿಸಿದ್ದಾರೆ.

ನೊಂದವರಿಗೆ ನ್ಯಾಯ ಕೊಟ್ಟ ಕೋರ್ಟ್
ಅಸ್ಪೃಶ್ಯತೆ ಪ್ರಕರಣದಲ್ಲಿ ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ ಸಿ ಅವರು ಆರೋಪಿಗಳ ಮೇಲಿನ ಆರೋಪವನ್ನ ಪರಿಶೀಲನೆ ನಡೆಸಿ ನೊಂದವರಿಗೆ ನ್ಯಾಯ ಕೊಡುವ ಮೂಲಕ ದೇಶದಲ್ಲಿಯೇ ಪರಿಶಿಷ್ಟರಿಗೆ
ಬಹು ದೊಡ್ಡ ನ್ಯಾಯ ಕೊಡುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ಮರುಕುಂಬಿ ಗ್ರಾಮದಲ್ಲಿ ಬಂದೋಬಸ್ತ್

ಮರುಕುಂಬಿ ಅಸ್ಪೃಶ್ಯತೆ ಪ್ರಕರಣದ ತೀರ್ಪು ಪ್ರಕಟವಾದ ಬೆನ್ನಲ್ಲೇ ಗಂಗಾವತಿ ಪೊಲೀಸರು
ಗ್ರಾಮದಲ್ಲಿ ಠಿಕಾಣಿ ಹೂಡಿದ್ದು ಗ್ರಾಮದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಲ್ಲದೇ, ಡಿಪಿಎಸ್ ಸೇರಿದಂತೆ ಇಡೀ ಪೊಲೀಸ್ ಪಡೆಯೇ ಗ್ರಾಮದಲ್ಲಿ ರಾತ್ರಿ ಠಿಕಾಣಿ ಹೂಡಿದೆ. ಗ್ರಾಮದಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next