ದಾವಣಗೆರೆ: ವರದಕ್ಷಿಣೆ ಸಂಬಂಧ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ರೂಪಾಯಿ ದಂಡ ವಿಧಿಸಿದೆ.
ಚನ್ನಗಿರಿ ತಾಲೂಕಿನ ಮೆದುಗೊಂಡನಹಳ್ಳಿ ಗ್ರಾಮದ ಮಂಜುನಾಥ್ ಶಿಕ್ಷೆಗೆ ಒಳಗಾದವ. ಮಂಜುನಾಥ್ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಮಾರುತಿ ನಗರದ ಶೋಭಾರಾಣಿ ಎಂಬುವರನ್ನು ವಿವಾಹವಾಗಿದ್ದು, ಮದುವೆ ಸಂದರ್ಭದಲ್ಲಿ ಐದು ತೊಲ ಬಂಗಾರ, 15 ತೊಲ ಬೆಳ್ಳಿಯನ್ನು ವರದಕ್ಷಿಣೆಯಾಗಿ ಪಡೆದಿದ್ದನು.
ಮದುವೆಯಾದ ದಿನದಿಂದಲೂ ಮಂಜುನಾಥ್ ಮತ್ತು ಅವರ ಮನೆಯವರು ಸೇರಿಕೊಂಡು ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಶೋಭಾರಾಣಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದುದ್ದರಿಂದ ಬೇಸತ್ತು 2020ರ ಡಿ. 14 ರಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿ.15 ರಂದು ಮೃತಪಟ್ಟಿದ್ದರು.
ತಮ್ಮ ಮಗಳ ಸಾವಿಗೆ ಕಾರಣರಾದ ಅಳಿಯ ಮಂಜುನಾಥ್, ಅತ್ತೆ, ಮಾವ, ನಾದಿನಿ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ಶೋಭಾರಾಣಿ ತಾಯಿ ನಿಂಗಮ್ಮ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಉಪಾಧೀಕ್ಷಕ ಪ್ರಶಾಂತ್ ಮುನ್ನೊಳ್ಳಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಶೋಭಾರಾಣಿ ಪತಿ ಮಂಜುನಾಥ್ ಮೇಲಿನ ಆರೋಪ ಸಾಬೀತಾಗಿದ್ದರಿಂದ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. 40 ಸಾವಿರ ರೂಪಾಯಿ ದಂಡದ ಮೊತ್ತದಲ್ಲಿ 35 ರೂಪಾಯಿಯನ್ನು ಶೋಭಾರಾಣಿ ಕುಟುಂಬದವರಿಗೆ ನೀಡುವಂತೆ ಹಾಗೂ ಉಳಿದ 5 ಸಾವಿರ ರೂಪಾಯಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಕೆ.ಎಸ್. ಸತೀಶ್ ವಾದ ಮಂಡಿಸಿದ್ದರು.