ಕೊಪ್ಪಳ: ಸರ್ಕಾರ ಶಾಲೆ ತೆರೆಯುವಲ್ಲಿ ನೂರೆಂಟು ಬಾರಿ ಚಿಂತಿಸಿ 10ನೇ ತರಗತಿ ಆರಂಭಿಸಿದೆ. ಉಳಿದೆಲ್ಲವನ್ನು ವಿದ್ಯಾಗಮ ಯೋಜನೆಗೆ ಮೀಸಲಿಟ್ಟಿದೆ. ಇವೆಲ್ಲದರ ಮಧ್ಯೆ ವಸತಿ ಶಾಲೆಯ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಇತ್ತ ವಿದ್ಯಾಗಮವೂ ಇಲ್ಲ, ಅತ್ತ ತರಗತಿಗಳೂ ಇಲ್ಲದಂತಾಗಿದೆ.
ಹೌದು. ಸರ್ಕಾರವು ಕೋವಿಡ್-19 ಕಾರಣದಿಂದ ಶಾಲೆಗಳನ್ನು ಆರಂಭಿಸಲು ನೂರೆಂಟು ಬಾರಿ ಚಿಂತನೆ ಮಾಡುತ್ತಿದೆ. ಅಚ್ಚರಿಯೆಂಬಂತೆ, ಈಚೆಗೆ ಚಿತ್ರಮಂದಿರ, ಜಾತ್ರೆ, ಸಂತೆ, ಮಾರುಕಟ್ಟೆ ಸೇರಿದಂತೆ ಸಭೆ, ಸಮಾರಂಭಕ್ಕೂ ವಿನಾಯಿತಿ ನೀಡಿದೆ. ಆದರೆ ಶಾಲೆ ಆಂಭಿಸಲು ಮಾತ್ರ ಕೋವಿಡ್ ಕಾರಣ ಹೇಳುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು ಬೀಳಲಿದೆ ಎನ್ನುವ ಆಪಾದನೆ ಪಾಲಕರಿಂದ ಕೇಳಿ ಬಂದಿದೆ.
ಪ್ರಸ್ತುತ ಸರ್ಕಾರವು 10ನೇ ತರಗತಿಯನ್ನು ಆರಂಭಿಸಿದೆ. 6ರಿಂದ 9ನೇ ತರಗತಿವರೆಗೂ ಎಲ್ಲ ವಿದ್ಯಾರ್ಥಿಗಳಿಗೆ ವೇಳಾಪಟ್ಟಿ ಅನುಸಾರ ವಿದ್ಯಾಗಮ ಯೋಜನೆಯಡಿ ವಿವಿಧ ಚಟುವಟಿಕೆ ಕೈಗೊಳ್ಳುವಂತೆ ಶಾಲೆಗಳಿಗೆ ನಿರ್ದೇಶನ ನೀಡಿದೆ. ಆದರೆ ಸರ್ಕಾರ ವಸತಿ ಶಾಲೆ ವಿದ್ಯಾರ್ಥಿಗಳ ಹಿತ ಕಾಪಾಡುವುದನ್ನೇ ಮರೆತಂತೆ ಕಾಣುತ್ತಿದೆ. ವಸತಿ ಶಾಲೆ ವಿದ್ಯಾರ್ಥಿಗಳ ಸ್ಥಿತಿಯು ನಿಜಕ್ಕೂ ಅತಂತ್ರವಾಗಿದೆ.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಇಲಾಖೆಯಡಿ ಸಾವಿರಾರು ವಸತಿ ಶಾಲೆಗಳಿವೆ. ಈ ವಿದ್ಯಾರ್ಥಿಗಳಿಗೆ 10ನೇ ತರಗತಿಗೆ ಮಾತ್ರ ಪ್ರವೇಶಾತಿಗೆ ಅವಕಾಶ ದೊರೆತಿದೆ. ಅದೂ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನೆಗಟಿವ್ ವರದಿಯೊಂದಿಗೆ ಶಾಲೆಗೆ ಹಾಜರಾಗಬೇಕಿದೆ. ಹಲವೆಡೆ ಪಾಲಕರು ಕೋವಿಡ್ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಫೆ. 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಸತಿ ಶಾಲೆಗೆ ಹಾಜರಿಗೆ ಸೂಚಿಸಿದೆ. ಬಹುಪಾಲು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ.
ಇನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಈಗಾಗಲೇ ವಿದ್ಯಾಗಮ ನಡೆದಿದ್ದರೆ, ವಸತಿ ಶಾಲೆಯ 7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳು ವಿದ್ಯಾಗಮ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಇತ್ತ ವಸತಿ ಶಾಲೆಯ ಪಾಠವೂ ಇಲ್ಲ. ಅತ್ತ ವಿದ್ಯಾಗಮವೂ ಇಲ್ಲದಂತಾಗಿದೆ. ಆದರೆ ವಸತಿ ಶಾಲೆ ಶಿಕ್ಷಕರು ವಿದ್ಯಾರ್ಥಿಗಳಿಗೆ ನಿಮ್ಮೂರಿನಲ್ಲಿಯೇ ಸರ್ಕಾರಿ ಶಾಲೆಯ ವಿದ್ಯಾಗಮಕ್ಕೆ ಹಾಜರಾಗಿ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಕೆಲವರು ಆನ್‌ಲೈನ್ ಪಾಠ ಮಾಡುವ ಮಾತನ್ನಾಡುತ್ತಿದ್ದಾರೆ.
ಆಂಗ್ಲ ಮಾಧ್ಯಮದ ಮಕ್ಕಳಿಗೆ ತೊಂದರೆ: ಇನ್ನೂ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಇರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಗಮ ನಡೆಯುತ್ತಿದೆ. ಹೀಗಾಗಿ ವಸತಿ ಶಾಲೆಯ ವಿದ್ಯಾರ್ಥಿಗಳು ತುಂಬ ತೊಂದರೆ ಎದುರಿಸುತ್ತಿದ್ದಾರೆ. ಪಠ್ಯ ಇರುವುದು ಆಂಗ್ಲ ಮಾಧ್ಯಮದಲ್ಲಿ, ವಿದ್ಯಾಗಮವು ಕನ್ನಡದಲ್ಲಿ ಹಾಗಾಗಿ ಮುಂದೆ ಪರೀಕ್ಷೆ ಎದುರಾದರೆ ಹೇಗೆ ಎನ್ನುವ ಆತಂಕ ಮಕ್ಕಳಲ್ಲಿ ಕಾಡುತ್ತಿದೆ. ಇಂತಹ ಸಮಸ್ಯೆಗಳ ಕುರಿತು ಸರ್ಕಾರ ಹೆಚ್ಚಿನ ಗಮನವನ್ನೇ ಹರಿಸಿಲ್ಲ. ಸುಮ್ಮನೆ ಸರ್ಕಾರಿ ಶಾಲೆಯ ವಿದ್ಯಾಗಮಕ್ಕೆ ತೆರಳಿ ಎಂದು ಹೇಳುತ್ತಿದೆ.
ಇದನ್ನೂ ಓದಿ : 4 ಜಿಪಂ ಗೆಲ್ಲುವ ವಿಶ್ವಾಸವಿದೆ: ಪೂಜಾರಿ
ಪಾಲಕರು ಮಾತ್ರ, ಕೋವಿಡ್‌ಗೆ ಔಷಧ ಬಂದಿದೆ. ಸರ್ಕಾರವು ಶಾಲೆಗಳನ್ನು ಬಿಟ್ಟು ಉಳಿದೆಲ್ಲ ಕಾರ್ಯ ಚಟುವಟಿಕೆ ಆರಂಭ ಮಾಡಿದೆ. ಮಾರುಕಟ್ಟೆ ತೆರೆದಿವೆ. ಚಿತ್ರ ಮಂದಿರಕ್ಕೂ ಅನುಮತಿ ಕೊಟ್ಟಿದೆ. ಜಾತ್ರೆ, ಸಂತೆಗಳು ನಡೆಯುತ್ತಿವೆ. ಮಕ್ಕಳ ಶಾಲೆ ಆರಂಭಕ್ಕೆ ಮೀನಮೇಷ ಎಣಿಸುವುದು ತರವಲ್ಲ. ಕೂಡಲೇ ಎಲ್ಲ ಶಾಲೆಗಳನ್ನು ಆರಂಭಿಸಿ ಎನ್ನುವ ಒತ್ತಾಯ ಕೇಳಿ ಬಂದಿದೆ.