ಕುಷ್ಟಗಿ: ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಗ್ರಾನೈಟ್ ಪಾಲೀಶ್ ಘಟಕಗಳಿಂದ ವಿಸರ್ಜಿಸುವ ಮಡ್ (ದ್ರವ ರೂಪದ ತ್ಯಾಜ್ಯ) ಪರಿಸರಕ್ಕೆ ಮಾರಕವಾಗಿರುವುದಲ್ಲದೇ ಜೀವ ಜಂತುಗಳಿಗೆ ಮಾರಕವಾಗಿದೆ.
ಕುಷ್ಟಗಿಯಲ್ಲಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಈ ಗ್ರಾನೈಟ್ ಪಾಲೀಸ್ ಕಾರ್ಖಾನೆಗಳು ತಲೆ ಎತ್ತಿದ ಸಂದರ್ಭದಲ್ಲಿ ತ್ಯಾಜ್ಯದ ಮಡ್ ಹಳ್ಳ, ತಗ್ಗು ಪ್ರದೇಶದ ಎಲ್ಲೆಂದರಲ್ಲಿ ಸುರಿಯುತ್ತಿದ್ದರು. ಈ ಬೆಳವಣಿಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಕುಷ್ಟಗಿ ಕೈಗಾರಿಕಾ ಪ್ರದೇಶದ ಗ್ರಾನೈಟ್ ಮಾಲೀಕರು, ಕುಷ್ಟಗಿ-ಇಲಕಲ್ ಚತುಷ್ಪಥ ರಾಷ್ಟ್ರೀಯ
ಹೆದ್ದಾರಿಯಿಂದ ದೋಟಿಹಾಳ ರಸ್ತೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ 6 ಎಕರೆ ಜಮೀನು ಖರೀದಿಸಿದ್ದಾರೆ.
ಈಗಾಗಲೇ ಇಪ್ಪತ್ತಕ್ಕೂ ಅಧಿಕ ಅಡಿ ಆಳ ಗ್ರಾನೈಟ್ ದ್ರವ ರೂಪದ ತ್ಯಾಜ್ಯ ತುಂಬಿಸಿದ್ದು ಅಲ್ಲದೇ ನೆಲಮಟ್ಟದಿಂದ 3 ಅಡಿ ಎತ್ತರಕ್ಕೇರಿದೆ. ಭರ್ತಿಯಾದ ಘಟಕದಿಂದ ಕಲ್ಲಿನ ಪುಡಿ ಗಾಳಿಗೆ ಹಾರಿ ರೈತರ ಜಮೀನು ಸೇರುತ್ತಿದ್ದು ಫಲವತ್ತತೆ ನಾಶವಾಗುವ ಆತಂಕ, ಮಳೆ ನೀರು ಇಂಗಿ, ಕುರಿಗಳು, ನಾಯಿ ಸೇರಿದಂತೆ ಜಾನುವಾರು ಸಿಲುಕಿ ಹೊರ ಬರಲಾರದೇ ಜೀವ ಕಳೆದುಕೊಳ್ಳುತ್ತಿರುವುದು ಮತ್ತೊಂದೆಡೆಯಾಗಿದೆ. ಈ ಘಟಕ ಸಂಪೂರ್ಣ ಬಂದ್ ಮಾಡಿ, ಬೇರೆಡೆ ಸ್ಥಳಾಂತರಿಸಬೇಕಿದೆ ಎಂದು ರೈತರಾದ ಸಂಗಪ್ಪ ಬಳ್ಳೋಡಿ ಒತ್ತಾಯಿಸಿದ್ದಾರೆ.
ಕುರಿಯೊಂದು ಗ್ರಾನೈಟ್ ತ್ಯಾಜ್ಯ ಘಟಕದಲ್ಲಿ ಸಿಲುಕಿ ಸತ್ತಿರುವ ಪ್ರಕರಣ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಶೋಕ ಶಿಗ್ಗಾವಿ, ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಆನಂದ ದೇವರನಾವದಗಿ, ಕಂದಾಯ ನಿರೀಕ್ಷಕ ಉಮೇಶಗೌಡ್ರು, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾನೈಟ್ ಪಾಲಿಶ್ ಕಾರ್ಖಾನೆಯಿಂದ ಹೊರಬರುವ ತ್ಯಾಜ್ಯದ ಘಟಕದಲ್ಲಿ ಕುರಿಯೊಂದು ಸತ್ತಿರುವುದು ಗಮನಕ್ಕೆ ಬಂದಿದೆ.
ಸಂಬಂಧಿಸಿದವರಿಂದ ಮಾಹಿತಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವೆ.
ಅಶೋಕ, ಶಿಗ್ಗಾವಿ ತಹಶೀಲ್ದಾರ್ ಕುಷ್ಟಗಿ
ಗ್ರಾನೈಟ್ ತ್ಯಾಜ್ಯ ಘಟಕದ ಮಡ್‌ನಲ್ಲಿ ಸಿಲುಕಿ ಸತ್ತಿರುವ ಕುರಿ ಹೊರಗೆ ತೆಗೆಯಲಾಗಿದ್ದು, ಸತ್ತಿರುವ ಕುರಿ ಕೊಳೆತಿದ್ದು, ನಾಯಿಗಳು ತಿಂದು ಹಾಕಿದ್ದು ಪೋಸ್ಟ್‌ಮಾರ್ಟಂ ಮಾಡುವಷ್ಟು ದೇಹ ಉಳಿಸಿಲ್ಲ ಬರೀ ಚರ್ಮ ಮಾತ್ರ ಉಳಿಸಿವೆ. ಪರಿಹಾರಕ್ಕೆ ಪತ್ರ
ಬರೆಯಲಾಗುವುದು.
ಡಾ| ಆನಂದ ದೇವರನಾವದಗಿ,
ಪಶು ವೈದ್ಯಕೀಯ ಸೇವಾ ಇಲಾಖೆ ಕುಷ್ಟಗಿ