Advertisement

Koppal: ಎನ್‌ಡಿಆರ್‌ಎಫ್‌ ನಿಯಮದಡಿ ಪರಿಹಾರ ಕೊಡಿ

05:51 PM Dec 29, 2023 | Team Udayavani |

ಕೊಪ್ಪಳ: ರಾಜ್ಯದಲ್ಲಿ ಬರ ಆವರಿಸಿದೆ. ಸರ್ಕಾರ ರೈತರ ಖಾತೆಗೆ 2 ಸಾವಿರ ರೂ. ಹಾಕುವುದಾಗಿ ಹೇಳಿ ಮೂಗಿಗೆ ತುಪ್ಪ ಸವರುತ್ತಿದೆ. ಕಿಸಾನ್‌ ಸಮ್ಮಾನ್‌ ಯೋಜನೆ ರಾಜ್ಯ ಸರ್ಕಾರ ಮರು ಜಾರಿಗೊಳಿಸಬೇಕು. ಎನ್‌ಡಿಆರ್‌ ಎಫ್‌ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕು ಎಂದು ಸಂಸದ ಸಂಗಣ್ಣ ಕರಡಿ ಒತ್ತಾಯಿಸಿದರು.

Advertisement

ಯಲಬುರ್ಗಾ ತಾಲೂಕಿನ ವಣಗೇರಿ ಹಾಗೂ ಬೇವೂರು ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರ ಹಿತ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ ರೈತರ ಖಾತೆಗೆ 6 ಸಾವಿರ ರೂ. ಜಮಾ ಮಾಡುತ್ತಿದ್ದಾರೆ. ಬಿ. ಎಸ್‌. ಯಡಿಯೂರಪ್ಪ ಅವರು ಸಿಎಂ ಇದ್ದಾಗ ಈ ಯೋಜನೆಗೆ 4 ಸಾವಿರ ರೂ. ಸೇರಿಸಿ 10 ಸಾವಿರ ಹಾಕಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ರಾಜ್ಯ ಸರ್ಕಾರ ನೀಡುತ್ತಿದ್ದ 4 ಸಾವಿರ ರೂ. ಸ್ಥಗಿತಗೊಳಿಸಿದ್ದಾರೆ. ರೈತಪರ ಎನ್ನುವ ಕಾಂಗ್ರೆಸ್‌ ಕಿಸಾನ್‌ ಸಮ್ಮಾನ್‌ ಯೋಜನೆ ನಿಲ್ಲಿಸಿದ್ದೇಕೆ? ಬಿಜೆಪಿ ಅವಧಿಯಲ್ಲಿ ಜಾರಿ ಮಾಡಲಾಗಿದೆ ಎಂಬ ಏಕೈಕ ಕಾರಣದಿಂದ ರೈತ ಪರ ಯೋಜನೆಯನ್ನು ನಿಲ್ಲಿಸಿದೆ. ಯೋಜನೆ ಜಾರಿ ಮಾಡುವುದರಲ್ಲಿಯೂ ಕಾಂಗ್ರೆಸ್‌ ತಾರತಮ್ಯ ಮಾಡುತ್ತಿದೆ ಎಂದು
ಆರೋಪಿಸಿದರು.

ಬರಕ್ಕೆ ತತ್ತರಿಸಿ ರಾಜ್ಯದಲ್ಲಿ ಏಪ್ರಿಲ್‌-ಡಿಸೆಂಬರ್‌ ವರೆಗೆ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಣಿ ಆತ್ಮಹತ್ಯೆ ನಿಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ. ಆತ್ಮಹತ್ಯೆ ಸಂಬಂಧ ಸರ್ಕಾರ ಸಚಿವರುಗಳು ರೈತ
ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಪರಿಹಾರ ನೀಡದೇ ಕೇವಲ 2 ಸಾವಿರ ರೂ. ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದೇನಾ ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ? ಐಶಾರಾಮಿ ವಿಮಾನಗಳಲ್ಲಿ ಸುತ್ತಾಡಲು ಸರ್ಕಾರದ ಬಳಿ ಹಣ ಇದೆ. ಆದರೆ, ರೈತರಿಗೆ ಪರಿಹಾರ ನೀಡಲು ಏಕಿಲ್ಲ ಎಂದು ಪ್ರಶ್ನಿಸಿದರು.

ಈ ಹಿಂದೆ ರೈತರು ಸಿರಿಧಾನ್ಯ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದರು. ಆದರೀಗ ಸಿರಿಧಾನ್ಯ ಉತ್ಪಾದನೆ ಕಡಿಮೆಯಾಗಿದೆ. ಯುವಕರು ದುಶ್ಚಟಗಳ ದಾಸರಾಗಿದ್ದಾರೆ. ಮನೆಗೆ ಮಹಿಳೆಯರೇ ಆಧಾರ ಸ್ತಂಬವಾಗಿದ್ದಾರೆ. ರೈತರ ಉತ್ಪನ್ನ ಏರಿಕೆ ಹಾಗೂ ಪೌಷ್ಟಿಕಾಹಾರ ಬೆಳೆಯಲು ಕೇಂದ್ರ ಸರ್ಕಾರ ಹಲವಾರು ಯೋಜನೆ ಜಾರಿಗೊಳಿಸಿದೆ. ಇದರ ಸದುಪಯೋಗ ರೈತರು ಪಡೆಯಬೇಕು. ಇನ್ನು ಬೆಳೆ ಬೆಳೆಯುವ ಮುನ್ನ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

Advertisement

ಎಂಎಲ್‌ಸಿ ಹೇಮಲತಾ ನಾಯಕ ಮಾತನಾಡಿ, ಸಂಗಣ್ಣ ಕರಡಿ ಅವರು ಸಂಸದರಾದ ಬಳಿಕ ಗಣನೀಯವಾಗಿ ಅಭಿವೃದ್ಧಿ ಕೆಲಸಗಳಾಗಿವೆ. ರೈಲ್ವೆ, ಹೆದ್ದಾರಿ, ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಜಿಲ್ಲೆಗೆ ತಂದಿದ್ದಾರೆ. ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊಪ್ಪಳಕ್ಕೆ ಸಂಗಣ್ಣ ಕರಡಿಯವರು ಅಭಿವೃದ್ಧಿ ಹರಿಕಾರರಾಗಿದ್ದಾರೆ. ಕೇಂದ್ರದ ಪ್ರತಿಯೊಂದು ಯೋಜನೆಗಳನ್ನು ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮೋದಿ ಗೆಲ್ಲಿಸಿ ಪ್ರಧಾನಿ ಮಾಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ತ್ರಿವಳಿ ತಲಾಖ್‌ ರದ್ದತಿ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ  ರದ್ದತಿ, ರಾಮ ಮಂದಿರ
ನಿರ್ಮಾಣಕ್ಕೆ ಕ್ರಮ, ಕೃಷಿಕರಿಗೆ ನೆರವು ಮೊದಲಾದ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಅವರು ಮತ್ತೂಂದು ಅವಧಿಗೆ ಪ್ರಧಾನಮಂತ್ರಿ ಆಗಬೇಕು. ಆದ್ದರಿಂದ ಜನರು ಬಿಜೆಪಿ ಗೆಲ್ಲಿಸಿ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಿ ಎಂದು ಮನವಿ
ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next