Advertisement

ಗಿಣಗೇರಿ ಕೆರೆ ಹಸಿರೀಕರಣಕ್ಕೆ ಅಸ್ತು

08:50 PM Jun 25, 2021 | Team Udayavani |

ವರದಿ: ದತ್ತು ಕಮ್ಮಾರ

Advertisement

ಕೊಪ್ಪಳ: ನಗರದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಕೃಪೆಯಿಂದ ತನ್ನ ಚಹರೆಯನ್ನೇ ಬದಲಿಸಿಕೊಂಡಿದ್ದ ಗಿಣಗೇರಿ ಕೆರೆಯ ಹಸಿರೀಕರಣಕ್ಕೆ ಚಾಲನೆ ದೊರೆತಿದೆ. ಕೆರೆಯ ದಡದಲ್ಲಿ 40 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಆರಂಭಿಕ 18,500 ಸಸಿ ನೆಡುವ ಯೋಜನೆ ರೂಪಿಸಲಾಗಿದ್ದು, 40ಕ್ಕೂ ಹೆಚ್ಚು ತಳಿಯ ಸಸಿಗಳನ್ನು ನೆಡುತ್ತಿರುವುದು ವಿಶೇಷವಾಗಿದೆ.

ಹೌದು, ಬರದ ನಾಡಿನಲ್ಲಿ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಜಲ ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲಾದ್ಯಂತ ಹಳ್ಳ-ಕೊಳ್ಳ ಸೇರಿದಂತೆ ಕೆರೆಕಟ್ಟೆಗಳ ಹೂಳೆತ್ತುವ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ. ಇದಲ್ಲದೇ 300 ಎಕರೆ ವಿಸ್ತಾರದ ಗಿಣಗೇರಿ ಕೆರೆಯಲ್ಲಿ ತಿಂಗಳಿಗೂ ಹೆಚ್ಚು ಕಾಲ ಸ್ಥಳೀಯರ ನೆರವಿನೊಂದಿಗೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ.

ಕೋವಿಡ್‌ ಮಹಾಮಾರಿಯ ಮಧ್ಯೆಯೂ ಗಿಣಗೇರಿ ಹೂಳೆತ್ತುವ ಸೇವಾ ಕಾರ್ಯ ಯಾವ ಅಡೆತಡೆಯಾಗದೇ ನೆರವೇರಿದೆ. ಆದರೆ ಕೋವಿಡ್‌-19 ಎರಡನೇ ಅಲೆ ಜಿಲ್ಲೆಯಲ್ಲಿ ಆರ್ಭಟಿಸಿದ ಹಿನ್ನೆಲೆಯಲ್ಲಿ ಕೆರೆಯ ಸುತ್ತ ಸಸಿ ನೆಡುವ ಯೋಜನೆಗೆ ಸ್ವಲ್ಪ ವಿಳಂಬವಾಯಿತು. ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ವಿಸ್ತಾರ ಪ್ರದೇಶದ ಗಿಣಗೇರಿ ಕೆರೆಯಲ್ಲಿ ಹಸಿರೀಕರಣಕ್ಕೆ ಚಾಲನೆ ನೀಡಲಾಗಿದೆ.

40 ಸಾವಿರ ಸಸಿ ನೆಡುವ ಗುರಿ: ಗಿಣಗೇರಿ ಕೆರೆಯಲ್ಲಿನ ಮಣ್ಣು ತೆಗೆದು ಬಂಡ್‌ ನಿರ್ಮಾಣ ಮಾಡಲಾಗಿದೆ. ಆ ಬಂಡ ಬದುವಿಗೆ ಸಸಿ ನೆಟ್ಟು ಬೆಳೆಸುವ ಮೂಲಕ ಹಸಿರೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಸಾಮಾಜಿಕ ಅರಣ್ಯ, ತೋಟಗಾರಿಕೆ ಇಲಾಖೆಯಿಂದ 40 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ. ಆದರೆ ಒಂದೇ ಬಾರಿಗೆ ಇಷ್ಟು ಸಸಿ ನೆಡುವುದಿಲ್ಲ. ಹಂತ ಹಂತವಾಗಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ತೋಟಗಾರಿಕೆಯಿಂದ ಶೋ ಪ್ಲಾಂಟ್‌ ನೆಡಲಾಗುತ್ತಿದ್ದರೆ ಸಾಮಾಜಿಕ ಅರಣ್ಯದಿಂದ ನೇರಳೆ, ಹೊಳೆಮತ್ತಿ, ಬಸವನ ಪಾದ, ಚಳ್ಳೆ, ಗುಮ್ಮಾರ, ಹೊಂಗೆ, ಬೇವು, ನೆಲ್ಲೆ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನಡೆಲಾಗುತ್ತಿದೆ.

Advertisement

ಪ್ರಸ್ತುತ ಗಿಣಗೇರಿ ಗ್ರಾಪಂ ಹಾಗೂ ಸಾಮಾಜಿಕ ಅರಣ್ಯದಿಂದ ಉದ್ಯೋಗ ಖಾತ್ರಿ ಯೋಜನೆಯಡಿ 18,500 ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 18,000 ಮರವಾಗಿ ಬೆಳೆಯುವ ಸಸಿ ನೆಡುತ್ತಿದ್ದರೆ, 15 ಸಾವಿರ ಸಣ್ಣ ಗಿಡಗಳಾಗಿ ಬೆಳೆಯುವ ಸಸಿಗಳನ್ನು ನೆಡಲಾಗುತ್ತಿದೆ. ಈ ಪೈಕಿ ಮೊದಲ ದಿನ 1000 ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಚಾಲನೆ ನೀಡಲಾಗಿದೆ. ಗಿಣಗೇರಿ ಕೆರೆ ಹೂಳೆತ್ತುವ ಸಮಿತಿಯ ಮುಖಂಡರು ಸೇರಿ ಕಂದಾಯ, ಅರಣ್ಯ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗಿಡಗಳನ್ನು ಬೆಳೆಸುವ ಜವಾಬ್ದಾರಿ ವಹಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next