Advertisement
ಇವತ್ತು ಅದೇ ಗಾಯನದ ಮೂಲಕ ರಾಜ್ಯಾದ್ಯಂತ ಹೆಸರಾಗಿರುವ ಕೊಪ್ಪಳದ ಈ ಗಂಗಮ್ಮಗೆ ಜ್ಯೂನಿಯರ್ ಜಾನಕಿ ಅನ್ನೋ ಬಿರುದು ಸಿಕ್ಕಿದೆ. ಹಾಗಂತ, ಮಧುರ ಹಾಡುಗಾರ್ತಿ ಗಂಗಮ್ಮನ ಜೀವನ ಮಧುರವಾಗೇನೂ ಇಲ್ಲ. ಕೊಪ್ಪಳದ ಅಂಬೇಡ್ಕರ್ ನಗರದ ಯಮನೂರಪ್ಪ, ಹನುಮವ್ವ ದೊಡ್ಡಮನಿ ದಂಪತಿಯ ಮೊದಲ ಪುತ್ರಿ ಈಕೆ. ಚಿಕ್ಕಂದಿನಿಂದಲೇ ಗಾಯನದ ಕಡೆ ಒಲವು ಇತ್ತು. ತಂದೆ ಕೊಪ್ಪಳದ ಚಿತ್ರ ಮಂದಿರದಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಬಯಲಾಟ, ದೊಡ್ಡಾಟಗಳಲ್ಲಿ ಅಭಿನಯಿಸುತ್ತಿದ್ದರು. ಹಾರೊ¾àನಿಯಂ ನುಡಿಸುತ್ತಿದ್ದರು. ಭಜನೆಯ ಮೇಲೆ ಅಪಾರ ಪ್ರೀತಿ ಇತ್ತು. ಅಪ್ಪನ ಸಂಗೀತ ಮೋಹಿಗುಣಗಳು ಗಂಗಮ್ಮನಿಗೂ ಬಂದು ಸಂಗೀತದ ಕಡೆ ಒಲವಾಯಿತು. ಯಾವ ಮಟ್ಟಿಗೆ ಎಂದರೆ, ಯಾರಾದರೂ ಹಾಡಿದರೆ ಗಂಗಮ್ಮ ಅತ್ತ ಚಿತ್ತವಿಟ್ಟು ಪೂರ್ಣ ಹಾಡು ಆಲಿಸಿ, ತಕ್ಷಣ ಕಲಿತೇ ಬಿಡುತ್ತಿದ್ದಳು.
Related Articles
Advertisement
ದಶಕದ ಹಿಂದೆ ಕೊಪ್ಪಳಕ್ಕೆ ಆರ್ಕೆಸ್ಟ್ರಾ ಬಂತೆಂದರೆ ಸಾಕು, ಸುಮ್ಮನೆ ಅವರು ಹಾಡುವ ಶೈಲಿಯನ್ನೇ ಕೇಳುತ್ತಿದ್ದ ಗಂಗಮ್ಮ, ಅದನ್ನು ಮನನ ಮಾಡಿಕೊಂಡು ಮನೆಯಲ್ಲಿ ಅದೇ ರೀತಿ ಹಾಡುತ್ತಿದ್ದಳು. ಆರ್ಕೆಸ್ಟ್ರಾ ತಂಡದಲ್ಲಿ ಹಾಡಲು ನನಗೂ ಅವಕಾಶ ಕೊಡಿ ಎಂದು ಕೇಳಿದ್ದೂ ಉಂಟು. ಆರಂಭದಲ್ಲಿ ಮೆ.ಕೆ.ಮೆಲೋಡಿಸ್ ಅವರು ಅವಕಾಶ ಕೊಟ್ಟರು. ಆಮೇಲೆ ಆರ್.ಕೆ.ಮೆಲೋಡಿಸ್‌ನಲ್ಲಿ ಗಾಯನ ಮುಂದುವರಿಸಿದಳು. ಬಳಿಕ ಶಿವಮೊಗ್ಗ, ಭದ್ರಾವತಿ, ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಿ, ಹಾಡಿ ವಾಪಸ್ ಬರುತ್ತಿದ್ದಳು. ಹೀಗೆ ಬದುಕು ಕಟ್ಟಲಾರಂಭಿಸಿದ ಗಂಗಮ್ಮಳ ಕಂಠಸಿರಿಗೆ ಎಲ್ಲೆಡೆ ಮನ್ನಣೆ ದೊರೆತು, ಕೈ ತುಂಬ ಕಾಸು ಸಿಗುವಂತಾಯಿತು. ಹಾಡಿನ ಆದಾಯದಲ್ಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಯಾವ ಕಾರ್ಯಕ್ರಮವೂ ಇಲ್ಲವೆಂದರೆ ಮತ್ತೆ ನಿತ್ಯ ಕೂಲಿ ಕೆಲಸಕ್ಕೆ ಹಾಜರಾಗುತ್ತಿದ್ದಳು. ಈಗಲೂ ಅಷ್ಟೇ. ಈಕೆಯ ಹಾಡಿನ ಹವ್ಯಾಸಕ್ಕೆ 20 ವರ್ಷ ಆಗಿದೆ. ಉತ್ಸಾಹ ಇನ್ನೂ ಬತ್ತಿಲ್ಲ.
ಬಯಲು ದಾರಿ, ಗೆಜ್ಜೆ ಪೂಜೆ, ಜನ್ಮ ಜನ್ಮದ ಅನುಬಂಧದ ಹಾಡುಗಳೆಂದರೆ ಗಂಗಮ್ಮಳಿಗೆ ಪಂಚಪ್ರಾಣ. ಹಿಂದಿ, ತೆಲುಗು ಸಿನಿಮಾ ಹಾಡುಗಳನ್ನೂ ಈಕೆ ಹಾಡಬಲ್ಲಳು. ಸಿನಿಮಾಗಳಲ್ಲಿ ಹಾಡುವ ಹಂಬಲವನ್ನು ಎಲ್ಲರಲ್ಲೂ ತೋಡಿಕೊಂಡೆ. ಸಾಧ್ಯವಾಗಲಿಲ್ಲ. ಕೊಪ್ಪಳದ ಬೀಡಿ ಪ್ರಚಾರ ಹಾಡುಗಳನ್ನು ಹಾಡಿದ್ದೇನೆ ಎಂದು ನೆನಪಿಸಿಕೊಳ್ಳುತ್ತಾರೆ ಗಂಗಮ್ಮ.
ಗಂಗಮ್ಮಗೆ ಈಗ 50 ವರ್ಷ. ಸಿನಿಮಾದಲ್ಲಿ ಹಾಡುವ ಆಕೆಯ ಆಸೆ ಈಗ ಈಡೇರುತ್ತಿದೆ. ಪರದೇಶಿ ಕೇರ್ ಆಫ್ ಲಂಡನ್, ಪದ್ಮಾವತಿ ಎನ್ನುವ ಕನ್ನಡದ ಚಿತ್ರಗಳಿಗೆ ಹಾಡುತ್ತಿದ್ದಾರೆ. ಅಚ್ಚರಿ ಎಂದರೆ, ಗಂಗಮ್ಮಳ ಹೆಸರಲ್ಲಿ ರಾಷ್ಟ್ರೀಕೃತ ಬ್ಯಾಂಕಲ್ಲಿ ಖಾತೆ ಇಲ್ಲ. ಸ್ವಂತ ಮನೆ ಇಲ್ಲ. ಬದುಕನ್ನು ನಡೆಸಲು ಈಕೆ ಗಾಯನವನ್ನೇ ನಂಬಿಕೊಂಡಿದ್ದಾರೆ.
ದತ್ತಪ್ಪ ಕಮ್ಮಾರ