ಕೊಪ್ಪಳ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು. ಸೇವಾ ಭದ್ರತೆ ಜೊತೆಗೆ ಕನಿಷ್ಠ ವೇತನ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇಲಾಖೆಯು ಪಾನ್ ಕಾರ್ಡ್ ನೀಡದವರಿಗೆ, ಹಣ ಕಡಿತ ಆಗದವರಿಗೂ ನಿವೃತ್ತಿ ಸೌಲಭ್ಯ ಬಿಡುಗಡೆ ಮಾಡಬೇಕು. 2016ರ ಏಪ್ರಿಲ್ನಿಂದ ಆಯ್ಕೆಯಾದ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಕಾಯಂ ನಿವೃತ್ತಿ ಸೌಲಭ್ಯ ನೀಡಬೇಕು. ಈಗಾಗಲೇ ನಿವೃತ್ತಿಯಾದವರಿಗೆ ಕನಿಷ್ಠ 3 ಸಾವಿರ ಪಿಂಚಣಿ ನೀಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಬೇಕು. ಕೇಂದ್ರಗಳಲ್ಲಿ ಮಾತೃಪೂರ್ಣ ಯೋಜನೆ ಯಶಸ್ವಿಯಾಗಿದ್ದು, ಹೆಚ್ಚುವರಿ ಸಹಾಯಕಿಯರನ್ನು ನೀಡಬೇಕು ಎಂದು ಒತ್ತಾಯಿಸಿದರು.
ಖಾಲಿ ಹುದ್ದೆ ಭರ್ತಿಗೆ ಒತ್ತಾಯ: ಮೇಲ್ವಿಚಾರಕಿಯಾಗಿ ಬಡ್ತಿ ಹೊಂದುವ ಹುದ್ದೆಗಳನ್ನು ಅಂಗನವಾಡಿ ನೌಕರರಿಗೆ ನೀಡಬೇಕು. ಸಹಾಯಕಿ ಹಾಗೂ ಕಾರ್ಯಕರ್ತೆಯರಿಗೆ ಮುಂಬಡ್ತಿ ನೀಡುವಲ್ಲಿ ಕೆಲವೊಂದು ಮಾರ್ಪಾಡು ಮಾಡಬೇಕು. ಅನುಕಂಪದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಮದುವೆಯಾಗದ ಮಹಿಳೆಯರಿಗೆ ಷರತ್ತು ತೆಗೆದು ಕುಟುಂಬದವರಿಗೆ ಎಂಬ ತಿದ್ದುಪಡಿ ತರಬೇಕು. ಖಾಲಿ ಇರುವ ಸಹಾಯಕಿ ಹಾಗೂ ಕಾರ್ಯಕರ್ತೆಯ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಹಲವು ಯೋಜನೆಗಳಿಗೆ ಡಿಡಿ, ಡಿಒ, ಸಿಡಿಪಿಒ, ಮೇಲ್ವಿಚಾರಕಿಯರನ್ನು ಕಾಯಂ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾ ನಿಯಮಾವಳಿ ತರಬೇಕು. ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಾಸ್ ಕೊಡಬೇಕು. ಕೇಂದ್ರದ ಫಲಾನುಭವಿಗೆ ನೇರ ನಗದು ವರ್ಗಾವಣೆ ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು. ಅಂಗನವಾಡಿ ನೌಕರರು ಸರ್ಕಾರಿ ಕೆಲಸಗಳಿಗೆ ತೆರಳಿದ ವೇಳೆ ಅಪಘಾತ ನಡೆದರೆ ಅವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.