ಚಿಕ್ಕಮಗಳೂರು: ಕಾಫಿನಾಡಲ್ಲಿ ಮಂಗನ ಕಾಯಿಲೆ ಆತಂಕ ಮತ್ತಷ್ಟು ಹೆಚ್ಚಿದ್ದು, ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪೀಡಿತರ ಸಂಖ್ಯೆ 9ಕ್ಕೆ ಏರಿದೆ.
55 ವರ್ಷದ ಮಹಿಳೆಯೊಬ್ಬರಲ್ಲಿ ಕೆ.ಎಫ್.ಡಿ ಧೃಡಪಟ್ಟಿದ್ದು, 9 ಮಂದಿಯಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗುಣಮುಖರಾಗಿದ್ದಾರೆ.
ನಾಲ್ವರು ಕೆ.ಎಫ್.ಡಿ ಪೀಡಿತರು ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರೀಕ್ಷೆಗೊಳಪಟ್ಟಿದ್ದ 7 ಮಂದಿ ಪೈಕಿ ಒಬ್ಬರಲ್ಲಿ ಕೆ.ಎಫ್.ಡಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕಾಫಿ ಎಸ್ಟೇಟ್ ಭಾಗದಲ್ಲಿ ಕಂಡು ಬರುತ್ತಿರುವ ಕೆ.ಎಫ್.ಡಿ ಪ್ರಕರಣಗಳು, ಕೊಪ್ಪ ತಾಲೂಕಿನಲ್ಲೇ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಕೆ.ಎಫ್.ಡಿ ವಾರ್ಡ್ ಅನ್ನು ಕೂಡಾ ತೆರೆದಿದ್ದಾರೆ.