Advertisement

ಅತಿವೃಷ್ಟಿ: ಕೊಪ್ಪದಲ್ಲಿ 70ಕೋಟಿ ರೂ. ನಷ್ಟ

03:55 PM Nov 24, 2019 | Naveen |

ಕೊಪ್ಪ: ಈ ಬಾರಿ ಸುರಿದ ಭಾರೀ ಮಳೆಗೆ ಕೊಪ್ಪ ತಾಲೂಕಿನಲ್ಲಿ ಮನೆ, ಜಮೀನು, ರಸ್ತೆ, ವಿದ್ಯುತ್‌ ಸೇರಿದಂತೆ ವಿವಿಧ ಭಾಗಗಳಲ್ಲಿ ಅಂದಾಜು 70 ಕೋಟಿ ನಷ್ಟವಾಗಿದೆ. ಮನೆ ಕಳೆದುಕೊಂಡವರಿಗೆ ಶೇ.90 ರಷ್ಟು ಪರಿಹಾರ ನೀಡಲಾಗಿದ್ದು, ವಿವಿಧ ಇಲಾಖೆಗಳಲ್ಲಿ ಹಾನಿಯಾದ ಪ್ರದೇಶದಲ್ಲಿ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್‌ ತಿಳಿಸಿದರು.

Advertisement

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಳೆ ಆರ್ಭಟಕ್ಕೆ ತಾಲೂಕಿನ ಒಟ್ಟು 118 ಮನೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ 10 ಮನೆ ವಾಸಕ್ಕೆ ಯೋಗ್ಯವಾಗಿಲ್ಲ. 68 ಮನೆಗೆ ಭಾಗಶಃ ಹಾನಿಯಾಗಿದೆ. ಉಳಿದ 40 ಮನೆಗಳಿಗೆ ಕೊಂಚ ಹಾನಿ ಆಗಿದೆ. ವಾಸಿಸಲು ಯೋಗ್ಯವಲ್ಲದ 10 ಮನೆಗಳಿಗೆ ಸರ್ಕಾರದಿಂದ ಈಗಾಗಲೇ 1 ಲಕ್ಷ ರೂ. ಪರಿಹಾರ ದೊರಕಿದ್ದು, ಭಾಗಶಃ ಹಾನಿಯಾದ 68 ಮನೆಗಳಲ್ಲಿ ಮೂರು ಮನೆ ಹೊರತು ಪಡಿಸಿ ಉಳಿದ ಎಲ್ಲಾ ಮನೆಗಳಿಗೆ 25ಸಾವಿರ ರೂ.ಪರಿಹಾರ ಬಂದಿದೆ. ಕೊಂಚ ಹಾನಿ ಸಂಭವಿಸಿದ್ದ 10 ಮನೆಗಳಿಗೆ ಪರಿಹಾರ ಲಭಿಸಿದೆ. ಕಂದಾಯ ಇಲಾಖೆಯಲ್ಲಿ ಅಂದಾಜು 1.7 ಕೋಟಿ ರೂ. ಹಾನಿಯಾಗಿದೆ ಎಂದರು.

ಮಳೆ ಆರ್ಭಟಕ್ಕೆ ತಾಲೂಕಿನಲ್ಲಿ ಒಟ್ಟು 267 ವಿದ್ಯುತ್‌ ಕಂಬಗಳು ತುಂಡಾಗಿ ಉರುಳಿದ್ದು, 3 ಪರಿವರ್ತಕಗಳು (ಟಿಸಿ) ಹಾನಿಯಾಗಿದ್ದರಿಂದ ವಿದ್ಯುತ್‌ ಕಂಬ ಹಾಗೂ ಪರಿವರ್ತಕಗಳನ್ನು ಅಳವಡಿಸಲಾಗಿದೆ. ಮೆಸ್ಕಾಂಗೆ ಅಂದಾಜು 35.99ಲಕ್ಷ ರೂ. ಹಾನಿಯಾಗಿದೆ ಎಂದರು.

ಕೊಪ್ಪ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿಗಳು ಸೇರಿದಂತೆ ಅಂದಾಜು 65 ಲಕ್ಷ ರೂ. ಹಾನಿಯಾಗಿದೆ. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಉಳಿದ ಕೆಲಸ ಮಾಡಲು ಸರ್ಕಾರದಿಂದ ಹಣ ಬರಬೇಕು ಎಂದು ತಿಳಿಸಿದರು.

ಅತೀವೃಷ್ಟಿಯಿಂದ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಅಂದಾಜು 1.55 ಕೋಟಿ ರೂ. ನಷ್ಟವಾಗಿದೆ. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಅಂದಾಜು 908.04 ಎಕರೆ ಭತ್ತದ ಗದ್ದೆಗೆ ಹಾನಿಯಾಗಿದೆ ಎಂದು ವರದಿಯಾಗಿದ್ದು, ಅಂದಾಜು 49 ಲಕ್ಷ ರೂ. ಹಾನಿ ಸಂಭವಿಸಿದೆ. ಸರ್ಕಾರದಿಂದ
ರೈತರಿಗೆ ಹಂತ ಹಂತವಾಗಿ ಪರಿಹಾರದ ಹಣ ಬರುತ್ತಿದ್ದು, ರೈತರ ಖಾತೆಗೆ 7,200 ರೂ. ಜಮಾ ಆಗುತ್ತಿದೆ ಎಂದು ತಿಳಿಸಿದರು.

Advertisement

ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ 2,937.24 ಎಕರೆಯಷ್ಟು ಹಾನಿ ಸಂಭವಿಸಿದ್ದು, ಅಂದಾಜು 2.11 ಕೋಟಿ ರೂ. ನಷ್ಟವಾಗಿದೆ. 2136.2 ಎಕರೆಯಷ್ಟು ಕಾಫಿ ಬೆಳೆ ಹಾನಿಯಾಗಿದ್ದು, ಅಂದಾಜು 1.53 ಕೋಟಿಯಷ್ಟು ನಷ್ಟ ಸಂಭವಿಸಿದೆ. ಮಳೆಯ ಅಬ್ಬರಕ್ಕೆ 66 ಸರ್ಕಾರಿ ಕಟ್ಟಗಳಿಗೆ ಹಾನಿಯಾಗಿದೆ.

ರಾಜ್ಯ, ಜಿಲ್ಲಾ ಹೆದ್ದಾರಿ ಸೇರಿ ಒಟ್ಟು 231 ಕಿ.ಮೀ. ರಸ್ತೆ ಮಳೆಯ ಆರ್ಭಟಕ್ಕೆ ನಲುಗಿದೆ. 50 ಸೇತುವೆಗಳು ಸಂಪರ್ಕ ಕಡಿದುಕೊಂಡಿವೆ ಎಂದರು. 66 ಸರ್ಕಾರಿ ಕಟ್ಟಡಗಳಲ್ಲಿ 33 ಸರ್ಕಾರಿ ಶಾಲೆಗಳು ಸೇರಿದ್ದು, 1.5 ಕೋಟಿ ಹಾನಿ ಉಂಟಾಗಿದೆ. 8 ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗೆ ಹಾನಿಯಾಗಿದ್ದು, 2.29 ಲಕ್ಷ ರೂ. ನಷ್ಟವಾಗಿದೆ. 437 ಕಿ.ಮೀ. ಜಿಲ್ಲಾ ಹೆದ್ದಾರಿ ರಸ್ತೆ ಹಾನಿಯಾಗಿದ್ದು. 4.60 ಕೋಟಿ ನಷ್ಟವಾಗಿದೆ.

ಜಿಪಂ ರಸ್ತೆ 437.35 ಕಿ.ಮೀ. ಹಾನಿಯಾಗಿದ್ದು, 30.30 ಕೋಟಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ತಾಲೂಕಿನಲ್ಲಿ ನೆರೆಯಿಂದ ಹಾನಿಯಾದ ಎಲ್ಲಾ ಪ್ರದೇಶಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವರದಿ ಸಲ್ಲಿಸಿದ್ದಾರೆ. ಹಾನಿಗೆ ಒಳಗಾಗಿದ್ದ ಮನೆಗಳಿಗೆ ಪರಿಹಾರದ ಮೊತ್ತ ತಲುಪಿಸಿದ್ದೇವೆ. ಸಾಗುವಳಿ ಇಲ್ಲದ ಹಾನಿಯಾದ ಮನೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡಲಾಗುತ್ತದೆ.
.ಎರ್ರಿಸ್ವಾಮಿ,
 ತಹಶೀಲ್ದಾರ್‌, ಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next