ಕೊಪ್ಪ: ಮನುಷ್ಯ ತನ್ನ ಕಾರ್ಯ ಸಿದ್ಧಿಗಾಗಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಸದಾ ಒಳಿತು ಯೋಚಿಸಬೇಕು. ದೇವರ ಸ್ಮರಣೆಯಿಂದ ಮನಸ್ಸು ನಿರ್ಮಲವಾಗುತ್ತದೆ ಎಂದು ಹರಿಹರಪುರ ಮಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಕುದುರೆಗುಂಡಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ನಮ್ಮ ಹಳ್ಳಿಗೆ ನಮ್ಮ ಸ್ವಾಮೀಜಿ ಕಾರ್ಯಕ್ರಮದಲ್ಲಿ ದಿವ್ಯ ಸತ್ಸಂಗ, ಶಿವದೀಕ್ಷಾ, ಲಲಕ್ಷ್ಮೀ ನರಸಿಂಹ ಮಾಲಾಧಾರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮನುಷ್ಯನಿಗೆ ಸುಖ, ನೆಮ್ಮದಿ ಮುಖ್ಯ. ಜೀವನ ನಡೆಸಲು ಮನಸ್ಸು ಸಂತಸದಿಂದ ಕೂಡಿರಬೇಕು. ಆದ್ದರಿಂದ ಮನಸ್ಸು ಸುಂದರವಾಗಿದ್ದರೆ ಜೀವನವೂ ಸುಖಮಯವಾಗಿರುತ್ತದೆ. ಮನಸ್ಸನ್ನು ಸುಂದರವಾಗಿ ಕಾಪಾಡಿಕೊಳ್ಳಲು ಭಗವಂತನ ಸ್ಮರಣೆ ಮುಖ್ಯ. ನಿತ್ಯ ದೇವರ ಧ್ಯಾನ, ಪೂಜೆಯಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂದರು.
ಮನುಷ್ಯ ಜೀವನದಲ್ಲಿ ಸದಾ ಒಳಿತು ಮಾಡಬೇಕು, ಗ್ರಾಮ, ರಾಜ್ಯ, ದೇಶ, ಲೋಕ ಕಲ್ಯಾಣದ ಬಗ್ಗೆ ಯೋಚಿಸಬೇಕು. ಶುದ್ಧ ಮನಸ್ಸಿನಿಂದ ಕೆಲಸ ಮಾಡಿದರೆ ದೇವರು ಒಲಿಯುತ್ತಾನೆ. ದೇವರಿಗೆ ಯಾವುದೇ ಜಾತಿ, ಆಸ್ತಿ, ಅಂತಸ್ತು ಇಲ್ಲ. ಜೀವನದಲ್ಲಿ ಅಭಿವೃದ್ಧಿ ಹೊಂದಲು, ಶ್ರೇಯಸ್ಸಿಗೆ ಭಗವಂತನ ಸ್ಮರಣೆ ಅಗತ್ಯ ಎಂದರು.
ಗುರು ಎಂದರೆ ಜ್ಞಾನ. ಪ್ರತಿ ವಿಷಯ, ವಸ್ತುವಿನಲ್ಲಿ ಜ್ಞಾನ ಲಭಿಸುತ್ತದೆ. ಪ್ರಾಮಾಣಿಕತೆ, ಸತ್ಯದಿಂದ ಇದ್ದರೆ ಸುಲಭವಾಗಿ ಜ್ಞಾನ ಲಭಿಸುತ್ತದೆ ಎಂದು ತಿಳಿಸಿದರು. ಕುದುರೆಗುಂಡಿಯಿಂದ ಕಪಿಲಾಕಟ್ಟೆಯವರೆಗೆ ಸ್ವಾಮೀಜಿಯನ್ನು ಚಂಡೆ, ಮಂಗಳ ವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ಏಳು ಗಂಟೆಯಿಂದ ಭಜನೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ದಿನೇಶ್.ಡಿ, ಕೆಸಕುಡಿಗೆ ಕೃಷ್ಣಮೂರ್ತಿ, ರಾಮಣ್ಣ ಭಂಡಾರಿ, ನುಗ್ಗಿ ಮಂಜುನಾಥ, ಹೇಮಂತ ಶೆಟ್ಟಿ, ನಾಗೇಶ ನಾಯಕ್, ಶಿವಕುಮಾರ ಕುಣಜ, ಶಿವರಾಜ ಖಾಂಡ್ಯ, ಚೇತನ್ ಕುಮಾರ್, ಶಾಂತಿ ಜ್ಞಾನಪ್ರಕಾಶ್ ಇತರರು ಇದ್ದರು.