ಕೊಪ್ಪ: ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಜಾಗದ ಪಕ್ಕದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಏಕಾಏಕಿ ಟ್ರಂಚ್ ನಿರ್ಮಿಸಲು ಮುಂದಾಗಿದ್ದನ್ನು ತಡೆದ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹುಲ್ಲುಮಕ್ಕಿ ಗ್ರಾಮದಲ್ಲಿ ನಡೆದಿದೆ.
ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲುಮಕ್ಕಿ ಸರ್ವೆ ನಂ.23ರಲ್ಲಿ ಪ್ರವೀಣ್ ಎಂಬುವವರು ಗುಡಿಸಲು ನಿರ್ಮಿಸಿಕೊಂಡಿದ್ದರು. ಹುಲ್ಲುಮಕ್ಕಿ ಗ್ರಾಮ ಸರ್ವೆ ನಂ. 23ರಲ್ಲಿ ಸೆಕ್ಷನ್ 4(1) ಇದೆ. ಇಲ್ಲಿ ಅನ ಧಿಕೃತ ಮನೆಗಳನ್ನು ನಿರ್ಮಿಸಬಾರದು. ಇಲಾಖೆಯ ಆದೇಶವಿದೆ ಎಂದು ಮನೆಯ ಸುತ್ತ ಅರಣ್ಯಾಧಿಕಾರಿ ಶಫಿ ನೇತೃತ್ವದಲ್ಲಿ ಟ್ರಂಚ್ ನಿರ್ಮಿಸಲು ಮುಂದಾದಾಗ ಗ್ರಾಮಸ್ಥರು ವಿರೋಧಿಸಿದ್ದಾರೆ. ಬಡವ ಸಣ್ಣ ಗುಡಿಸಲು ನಿರ್ಮಿಸಿಕೊಂಡರೆ ತೆರವು ಮಾಡಲು ಇಲಾಖೆ ಮುಂದಾಗುತ್ತದೆ. ಅದೇ ಹಣವಂತರು ಎಕರೆಯಷ್ಟು ಜಾಗವನ್ನು ಕಬಳಿಸಿಕೊಂಡಿದ್ದರೂ ಇಲಾಖೆ ಸುಮ್ಮನಿರುತ್ತದೆ. ಇದೇ ಸರ್ವೆ ನಂಬರ್‌ನಲ್ಲಿ ಒತ್ತುವರಿ ಮಾಡಿದವರು ಇದ್ದಾರೆ. ಅವರ ಜಾಗಕ್ಕೆ ಮೊದಲು ಟ್ರಂಚ್ ನಿರ್ಮಿಸಿ, ನಂತರದಲ್ಲಿ ಬಡವನ ಗುಡಿಸಲಿಗೆ ಕೈ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯಧಿಕಾರಿ ಶಫಿ ಮಾತನಾಡಿ, ಇಲಾಖೆಯ ಆದೇಶದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಸೆಕ್ಷನ್ 4(1) ಜಾಗದಲ್ಲಿ ಅನಧಿಕೃತ ಮನೆ ನಿರ್ಮಾಣವಾಗಿದೆ. ಇಲ್ಲಿ ಮನೆಯನ್ನು ತೆರವುಗೊಳಿಸಿಲ್ಲ. ಮನೆಯ ಪಕ್ಕದಲ್ಲಿ ಟ್ರಂಚ್ ನಿರ್ಮಿಸುತ್ತೇವೆ. ಅವರು ವಾಸಿಸಲು ಸಮಸ್ಯೆ ಮಾಡಿಲ್ಲ ಎಂದು ತಿಳಿಸಿದರು.
ಜಿಪಂ ಸದಸ್ಯ ಎಸ್.ಎನ್. ರಾಮಸ್ವಾಮಿ ಪತ್ರಿಕೆಯೊಂದಿಗೆ ಮಾತನಾಡಿ, ಅರಣ್ಯ ಇಲಾಖೆಯವರು ಕೆಡಿಪಿ ಸಭೆಯಲ್ಲಿ ಟ್ರಂಚ್ ನಿರ್ಮಾಣ ಮಾಡಲ್ಲ ಎಂದು ಹೇಳಿದ್ದಾರೆ. ಇಲ್ಲಿ ನೋಡಿದರೆ ಟ್ರಂಚ್ ನಿರ್ಮಾಣ ಮಾಡಿದ್ದಾರೆ. ಟ್ರಂಚ್ ನಿರ್ಮಾಣದ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆಸಿದ್ದಾರೆ. ಮರ ಬೆಳೆಸಿ ಎನ್ನುವವರೆ ನಾಶ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಎಂ.ಕೆ.ಕಿರಣ್, ಗ್ರಾಮಸ್ಥರಾದ ಮಹೇಶ್, ರಾಘವೇಂದ್ರ, ಸಾಗರ್, ಸಂತೋಷ್ ಪೂಜಾರಿ, ರಮೇಶ್, ಸುಜಿತ್, ಸುನೀಲ್ ಪೂಜಾರಿ, ಶ್ರೇಯಸ್, ಸಾಗರ್ ಮುಂತಾದವರಿದ್ದರು.