ಕೊಪ್ಪ: ಅಡಿಕೆ, ಕಾಫಿ, ಕಾಣು ಮೆಣಸು ಹಾಗೂ ಕಸ್ತೂರಿ ರಂಗನ್ ವರದಿಯಂತಹ ಮಲೆನಾಡನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ನಾನು ಬದ್ಧನಾಗಿದ್ದೇಳೆ. ಕ್ಷೇತ್ರದ ಎಲ್ಲ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಬಗೆಹರಿಸುವತ್ತ ಗಮನ ಹರಿಸುತ್ತೇನೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಪಟ್ಟಣ ಪುರಭವನದಲ್ಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಬಿಜೆಪಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸ್ತೂರಿ ರಂಗನ್ ವರದಿ ಸುಪ್ರೀಂಕೋರ್ಟ್‌ನಲ್ಲಿದೆ. ವರದಿ ಬಗ್ಗೆ ಕೋರ್ಟ್ ಎಲ್ಲ ರಾಜ್ಯ ಸರ್ಕಾರಕ್ಕೆ ನೈರ್ಸಗಿಕವಾಗಿರು ಪ್ರದೇಶವೆಷ್ಟು ಹಾಗೂ ಮಾನವ ಬೆಳೆಸಿದ (ತೋಟ) ಪ್ರದೇಶವೆಷ್ಟು ಎಂದರೆ ದೇಶದಲ್ಲಿ ಕೇರಳ ಸರ್ಕಾರ ಹೊರತುಪಡಿಸಿ ಬೇರೆ ಯಾವ ಸರ್ಕಾರವೂ ಕೋರ್ಟ್‌ಗೆ ಮಾಹಿತಿ ನೀಡಿಲ್ಲ ಎಂದರು.
ಹಿಂದನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ವರದಿಯನ್ನು ಕೋರ್ಟ್‌ಗೆ ನೀಡಲಿಲ್ಲ ಎಂದ ಅವರು, ಪ್ರಧಾನಿ ಮೋದಿ ಬಳಿ ಈ ಹಿಂದೆ ಈ ಭಾಗದ ಸಂಸದರೆಲ್ಲ ಚರ್ಚೆ ನಡೆಸಿದ್ದೇವೆ. ಪ್ರಧಾನಿ ಮೋದಿಯವರು ಭರವಸೆ ನೀಡಿದ್ದಾರೆ. ಪ್ರಮುಖ ವಕೀಲರನ್ನು ನೇಮಿಸಿ ಕಸ್ತೂರಿ ರಂಗನ್ ವರದಿ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು.
ಕಳೆದ ಬಾರೀ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಉತ್ತೇಜನ ನೀಡುವ ಸಲುವಾಗಿ 14ನೇ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹಣವನ್ನು ನೀಡಿದರು. ಕೇಂದ್ರ ಸರ್ಕಾರದ ಮುಂದೆ ಹೊಸದೊಂದು ಯೋಜನೆಯಿದ್ದು, ಸ್ಥಳೀಯ ಸಂಸ್ಥೆಗಳಿಗೆ ನೂತನ ಕಾನೂನು ರಚಿಸಿ ಕೇಂದ್ರದಿಂದ ಹಣ ನೀಡಿ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಲಾಯಿತು ಹಾಗೂ ತಾಲೂಕು ಬಿಜೆಪಿ ಘಟಕದಿಂದ ಸಂಸದರಿಗೂ ಅಭಿನಂದನೆ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಡಿ.ಎನ್. ಜೀವರಾಜ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸದಸ್ಯರಾದ ಎಸ್.ಎನ್. ರಾಮಸ್ವಾಮಿ, ದಿವ್ಯಾ ದಿನೇಶ್, ಮುಖಂಡರಾದ ಅದ್ದಡ ಸತೀಶ್, ಹೊಸೂರ್ ದಿನೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪುಣ್ಯಪಾಲ್, ಸುರೇಶ್ ಇತರರು ಇದ್ದರು.