Advertisement

ಅತಿವೃಷ್ಟಿಪರಿಹಾರ ನೀಡುವಲ್ಲಿ ವಿಫಲ

11:47 AM Jun 24, 2019 | Naveen |

ಕೊಪ್ಪ: ಕಳೆದ ವರ್ಷ ಅತಿವೃಷ್ಠಿಯಿಂದ ಶೃಂಗೇರಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿ ರೈತರು ದನ,ಕರು ಮನೆಗಳನ್ನು ಕಳೆದುಕೊಂಡರು, ಜೀವ ಹಾನಿ ಸಹ ಆಗಿದೆ. ಅದರೆ, ಇಲ್ಲಿನ ಕಾಂಗ್ರೆಸ್‌ ಶಾಸಕ ರಾಜೇಗೌಡ ನೈಜ ಹಾನಿಗೆ ಒಳಗಾದವರಿಗೆ ಅತಿವೃಷ್ಠಿಯ ಪರಿಹಾರ ನೀಡದೆ ಕೇವಲ ಶಾಸಕರ ಹಿಂಬಾಲಕರ ಮನೆಗೆ ಮಾತ್ರ ಮಳೆಯಾದಂತೆ ಪರಿಹಾರ ನೀಡಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್‌. ಜೀವರಾಜ್‌ ಆರೋಪಿಸಿದರು.

Advertisement

ಪಟ್ಟಣದ ಬಸ್‌ ನಿಲ್ದಾಣದಲ್ಲಿ ಬಿಜೆಪಿ ರೈತ ಮೋರ್ಚಾದ ವತಿಯಿಂದ ಶಾಸಕರ ವೈಫಲ್ಯ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಾಜೇಗೌಡರು ಶಾಸಕರಾಗಿ ಆಯ್ಕೆಯಾದ ನಂತರ ಇದುವರೆಗೂ ಕೇವಲ ಒಂದೇ ಒಂದು ತ್ತೈಮಾಸಿಕ ಪ್ರಗತಿ ಪರೀಶೀಲನ ಸಭೆ ಕೆರೆದಿದ್ದಾರೆ ಹೊರತು, ಬೇರೆ ಸಭೆ ನಡೆಸಿಲ್ಲ. ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.

ಕಮಿಷನ್‌ ದಂಧೆ ನಡೆಸುತ್ತಿದ್ದಾರೆ, ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್‌ ಯೋಜನೆಯ ಉಪಯೋಗ ರೈತರಿಗೆ ಸಿಗದಂತೆ ನಡೆದುಕೊಳ್ಳುತ್ತಿದ್ದಾರೆ. ಶಾಸಕರಾದ ಮೇಲೆ ಸರ್ಕಾರಕ್ಕೆ ಬ್ಲಾಕ್‌ ಮೇಲ್ ಮಾಡಿ ಗೂಟದ ಕಾರು ಪಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಶಾಸಕರು ಕ್ಷೇತ್ರದಲ್ಲಿ ಹೀನ ರಾಜಕಾರಣ ನಡೆಸುತ್ತಿದ್ದು, ಕೃಷಿ ಇಲಾಖೆಯ ಎಡಿಎ ಕಮಿಷನ್‌ ಕೊಡಲಿಲ್ಲ, ಭ್ರಷ್ಟಾಚಾರಕ್ಕೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಇಲ್ಲಿಂದ ವರ್ಗಾವಣೆ ಮಾಡಿಸಿದ್ದಾರೆ. ಡಿ ದರ್ಜೆ ನೌಕರರ ಕೆಲಸ ಕಿತ್ತುಕೊಂಡರು. ಮುಂದಿನ ದಿನದಲ್ಲಿ ಶಾಸಕರು ಸೇಡಿನ, ಕಮಿಷನ್‌ ವ್ಯಾವಹಾರವನ್ನು ನಿಲ್ಲಿಸಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡದಿದ್ದರೆ ಆಹೋರಾತ್ರಿ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

Advertisement

ಜಿ.ಪಂ ಸದಸ್ಯ ಎಸ್‌.ಎನ್‌. ರಾಮಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್‌ ಮುಖಂಡನ ಒಂದು ಮನೆ ಇರುವ ರಸ್ತೆಗೆ 34 ಲಕ್ಷ ಹಣದ ಕಾಂಕ್ರೀಟ್ ರಸ್ತೆ ಮಾಡಿಸುತ್ತಾರೆ. ದಲಿತ, ಹಿಂದುಳಿದ ವರ್ಗದ ಜನರ ಮನೆಗಳಿಗೆ ರಸ್ತೆ ಸೌಲಭ್ಯವನ್ನು ನೀಡಲು ಶಾಸಕರು ಹಿಂದೇಟು ಹಾಕುತ್ತಾರೆ. ತಾಲೂಕಿನಲ್ಲಿ ಅಧಿಕಾರಿಗಳ ಕೊರತೆಯಿದೆ ಸರ್ಕಾರ ಇವರದ್ದೆ ಇದ್ದರೂ ಅಧಿಕಾರಿಗಳನ್ನು ಹಾಕಿಸುವ ತಾಕತ್‌ ಇಲ್ಲ ಎಂದರು.

ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಹೊಸೂರ್‌ ಮಾತನಾಡಿ, ಕಳೆದ ವರ್ಷ ಕೊಪ್ಪದಲ್ಲಿ 165 ಇಂಚು ಮಳೆಯಾಗಿದೆ. ರೈತರು ಮನೆ ಕಳೆದುಕೊಂಡಿದ್ದಾರೆ. ಆದರೆ, ಅವರಿಗೆ ಇಲ್ಲಿಯವರೆಗೂ ಪರಿಹಾರ ನೀಡಲಿಲ್ಲ, ಕೇಂದ್ರ ಸರ್ಕಾರ ನೀಡಿದ ಹಣವನ್ನೂ ರೈತರಿಗೆ ತಲುಪಿಸುವಲ್ಲಿ ಸೋತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷ ಎಚ್.ಎಂ. ರವಿಕಾಂತ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪುಣ್ಯಪಾಲ್ ಮಾತನಾಡಿದರು. ಜಿಪಂ ಸದಸ್ಯೆ ದಿವ್ಯಾ ದಿನೇಶ್‌, ಪಪಂ ಸದಸ್ಯೆ ರೇಖಾ, ಸುಜಾತಾ, ಇಸ್ಮಾಯಿಲ್, ಮುಖಂಡರಾದ ಅದ್ದಡ ಸತೀಶ್‌, ಎಚ್.ಆರ್‌. ಜಗದೀಶ್‌, ಸುರೇಶ್‌, ಉದಯ್‌ ಕುಮಾರ್‌ ಜೈನ್‌, ವಿಶ್ವ ಎಚ್.ಕೆ. ಅಬ್ದುಲ್ ಹಮೀದ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next