ಕಾಪು: ವಿದ್ವಾಂಸರುಗಳನ್ನು ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸುವ ಮೂಲಕ ಸಮಾಜಕ್ಕೆ ಹೊಸ ತಿರುವು ನೀಡಿದ ಇಂದಿನ ದಿನ ಸುದಿನವಾಗಿದೆ. ಇದರೊಂದಿಗೆ ವಿಶ್ವಕರ್ಮ ಸಮಾಜದಲ್ಲಿಯೇ ಪ್ರಥಮವಾಗಿ ಘಟಿಕೋತ್ಸವ ನಡೆಯುತ್ತಿದ್ದು, ಇದಕ್ಕೂ ತಾವೆಲ್ಲರೂ ಸಾಕ್ಷಿಗಳಾಗುತ್ತಿರುವುದು ಸಮಾಜದ ಭಾಗ್ಯವಾಗಿದೆ ಎಂದು ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಪಡು ಕುತ್ಯಾರು ಶ್ರೀಮತ್ ಆನೆಗುಂದಿ ಮಠದ ಸಭಾಂಗಣದಲ್ಲಿ ಹೇಮಲಂಬಿ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ನಡೆದ ಧರ್ಮ ಸಂಸತ್ತು ಮಹಾಸಭೆಯಲ್ಲಿ ಆಸ್ಥಾನ ವಿದ್ವಾಂಸ ಪದವಿ ಪ್ರದಾನಿಸಿ, ಘಟಿಕೋತ್ಸವದಡಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಆಶೀರ್ವಚನ ನೀಡಿದರು.ಪ್ರತಿಷ್ಠಾನ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗುರುವಂದನಾ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭದಲ್ಲಿ ವಿದ್ವಾನ್ ಮಹಾಮಹೋಪಾಧ್ಯಾಯ ಪಂಜ ಕೆ. ಭಾಸ್ಕರ ಭಟ್, ಘನಪಾಠಿ ವಿದ್ವಾನ್ ಚಂದುಕೂಡ್ಲು ಬಾಲಚಂದ್ರ ಭಟ್ ಇವರಿಗೆ ವೇದ ವಿಭಾಗದ ಆಸ್ಥಾನ ವಿದ್ವಾಂಸರನ್ನಾಗಿಸಿ ಶಾಸನ ಪತ್ರವನ್ನು ಪ್ರಧಾನ ಮಾಡಲಾಯಿತು. ಮಹಾಸಂಸ್ಥಾನದ ಶ್ರೀ ನಾಗಧರ್ಮೇಂದ್ರ ಸರಸ್ವತೀ ವೇದ ಸಂಜೀವಿನಿ ಪಾಠ ಶಾಲೆಯಲ್ಲಿ ವೇದಸಂಹಿತೆಯನ್ನು ಪೂರ್ಣಗೊಳಿಸಿದ 7 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ಶ್ರೀ ಮಠದ ದಿವಾಣ ಲೋಲಾಕ್ಷ ಆಚಾರ್ಯ, ಬ್ರಹ್ಮಶ್ರೀ ಅಕ್ಷಯ ಪುರೋಹಿತ್, ಚಾತುರ್ಮಾಸ್ಯ ವೃತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಮಂಗಳೂರು ಕೆ. ಕೇಶವ ಆಚಾರ್ಯ, ಅವಿಭಜಿತ ದ. ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು. ಕೆ. ಎಸ್. ಸೀತಾರಾಮ ಆಚಾರ್ಯ, ಪ್ರಮುಖರಾದ ವಿದ್ವಾನ್ ವೇ. ಬ್ರ. ಶಂಕರ ಆಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ, ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ದಿನೇಶ್ ಆಚಾರ್ಯ ಪಡುಬಿದ್ರಿ, ಸಮಾಜದ ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರುಗಳು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು, ಕಟಪಾಡಿ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ(ರಿ) ಪದಾಧಿಕಾರಿಗಳು, ವಿಶ್ವಸ್ಥರು, ವಿವಿಧ ಸಮಿತಿಗಳ ಮುಖ್ಯಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಗೌರವ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರ್ ಸ್ವಾಗತಿಸಿ, ಕಾರ್ಯದರ್ಶಿ ಸುರೇಶ್ ಆಚಾರ್ಯ ಕಾರ್ಕಳ ಪರಿಚಯಿಸಿದರು. ಪ್ರ. ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ ವಂದಿಸಿದರು. ಕೋಶಾಧಿಕಾರಿ ಪಿ. ವಿ. ಗಂಗಾಧರ ಆಚಾರ್ಯ ಉಡುಪಿ ಕಾರ್ಯಕ್ರಮ ನಿರೂಪಿಸಿದರು.