Advertisement

ಸಾಂಬಾ ನಾಡಿನಲ್ಲಿ ಮೆಸ್ಸಿ ಪಡೆಯ ಮೆರೆದಾಟ : 1-0 ಜಯ; ಆರ್ಜೆಂಟೀನಾಕ್ಕೆ ಕೊಪಾ ಅಮೆರಿಕ ಕಪ್‌

10:59 PM Jul 11, 2021 | Team Udayavani |

ರಿಯೋ ಡಿ ಜನೈರೋ: ಫ‌ುಟ್‌ಬಾಲ್‌ ಅಭಿಮಾನಿಗಳ ಪಾಲಿನ ಸೂಪರ್‌ ಸ್ಟಾರ್‌ ಲಿಯೋನೆಲ್‌ ಮೆಸ್ಸಿ ಮತ್ತು ಅವರ ಸಾರಥ್ಯದ ಆರ್ಜೆಂಟೀನಾ ತಂಡ ರವಿವಾರ ಮುಂಜಾನೆ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. “ಮರಕಾನ ಸ್ಟೇಡಿಯಂ’ನಲ್ಲಿ ನಡೆದ ಪ್ರತಿಷ್ಠಿತ “ಕೊಪಾ ಅಮೆರಿಕ ಕಪ್‌’ ಫ‌ುಟ್‌ಬಾಲ್‌ ಫೈನಲ್‌ನಲ್ಲಿ ಆರ್ಜೆಂಟೀನಾ ಆತಿಥೇಯ ಬ್ರಝಿಲ್‌ ತಂಡವನ್ನು ಅವರದೇ ನೆಲದಲ್ಲಿ ಮಣಿಸಿ ಮೆರೆದಾಡಿತು.

Advertisement

ಪಂದ್ಯದ ಫ‌ಲಿತಾಂಶವನ್ನು ಬರೆದ ಏಕೈಕ ಗೋಲು 22ನೇ ನಿಮಿಷದಲ್ಲಿ ಹಿರಿಯ ಸ್ಟ್ರೈಕರ್‌ ಏಂಜೆಲ್‌ ಡಿ ಮಾರಿಯ ಅವರಿಂದ ಸಿಡಿಯಿತು. ರೋಡ್ರಿಗೊ ಡಿ ಪೌಲ್‌ ನೀಡಿದ ಲಾಂಗ್‌ ಪಾಸ್‌ ಅನ್ನು ಕೀಪರ್‌ ಎಡರ್ಸನ್‌ ಅವರಿಗೆ ವಂಚಿಸುವಂತೆ ಮಾಡಿ ಗೋಲು ಪೆಟ್ಟಿಗೆಗೆ ತಳ್ಳಿದರು. ಇದು ಈ ಕೂಟದಲ್ಲಿ ಬ್ರಝಿಲ್‌ ಬಿಟ್ಟುಕೊಟ್ಟ ಕೇವಲ 3ನೇ ಹಾಗೂ ಅತ್ಯಂತ ದುಬಾರಿ ಗೋಲಾಗಿ ದಾಖಲಾಯಿತು.

ಮೆಸ್ಸಿಗೆ ಮೊದಲ ಟ್ರೋಫಿ
ಇಲ್ಲಿನ ಫ‌ಲಿತಾಂಶ ಎರಡು ಮಹೋನ್ನತ ನಿದರ್ಶನಗಳಿಂದ ಹೆಚ್ಚು ಮೌಲ್ಯಯುತವೆನಿಸಿದೆ. ಮೊದಲನೆಯದಾಗಿ, ಲಿಯೋನೆಲ್‌ ಮೆಸ್ಸಿ ಸಾರಥ್ಯದಲ್ಲಿ ಆರ್ಜೆಂಟೀನಾ ಮೊದಲ ಬಾರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ಟ್ರೋಫಿಯನ್ನೆತ್ತಿತು. ಇನ್ನೊಂದೆಡೆ, ಕೊಪಾ ಫೈನಲ್‌ ಇತಿಹಾಸದಲ್ಲಿ ಬ್ರಝಿಲ್‌ ತವರಿನ ಅಂಗಳದಲ್ಲಿ ಮೊದಲ ಸಲ ಸೋಲನುಭವಿಸಿತು. ಬ್ರಝಿಲ್‌ ತವರಿನ ಹಿಂದಿನ ಐದೂ ಫೈನಲ್‌ಗ‌ಳಲ್ಲಿ ಕಪ್‌ ಎತ್ತಿತ್ತು ಹಾಗೂ ಸುಮಾರು 2,500 ದಿನಗಳ ಕಾಲ ತವರಿನ ಅಜೇಯ ದಾಖಲೆಯನ್ನು ಕಾಯ್ದುಕೊಂಡು ಬಂದಿತ್ತು.

15ನೇ ಕೊಪಾ ಪ್ರಶಸ್ತಿ
ಇದು 29ನೇ ಕೊಪಾ ಅಮೆರಿಕ ಫೈನಲ್‌ನಲ್ಲಿ ಆರ್ಜೆಂಟೀನಾಕ್ಕೆ ಒಲಿದ 15ನೇ ಪ್ರಶಸ್ತಿ. ಇದರೊಂದಿಗೆ ಉರುಗ್ವೆ ತಂಡದ ದಾಖಲೆಯನ್ನು ಸರಿದೂಗಿಸಿತು. ಬ್ರಝಿಲ್‌ 9 ಸಲ ಈ ಟ್ರೋಫಿ ಎತ್ತಿದೆ. ಇದಕ್ಕೂ ಮೊದಲು ಮೆಸ್ಸಿ ನಾಯಕತ್ವದಲ್ಲಿ ಆರ್ಜೆಂಟೀನಾ 3 ಸಲ ಫೈನಲ್‌ಗೆ ನೆಗೆದಿತ್ತು, ಮೂರೂ ಸಲ ಸಲ ಸೋಲುಂಡಿತ್ತು.

ಆರ್ಜೆಂಟೀನಾ 1993ರಲ್ಲಿ ಕೊನೆಯ ಸಲ ಕೊಪಾ ಅಮೆರಿಕ ಟ್ರೋಫಿ ಗೆದ್ದಿತ್ತು. ಅಂದು ಈಕ್ವಡಾರ್‌ನಲ್ಲಿ ನಡೆದ ಕೂಟದ ಫೈನಲ್‌ನಲ್ಲಿ “ಗ್ರೇಟ್‌’ ಗ್ಯಾಬ್ರಿಯಲ್‌ ಬಟಿಸ್ಟುಟ ಪಡೆ ಮೆಕ್ಸಿಕೋವನ್ನು 2-1ರಿಂದ ಮಣಿಸಿತ್ತು.
ಅಂದಹಾಗೆ ಆಗಿನ್ನೂ ಲಿಯೋನೆಲ್‌ ಮೆಸ್ಸಿ 6 ವರ್ಷದ ಬಾಲಕ!

Advertisement

ಆತಿಥ್ಯದಿಂದ ಹಿಂದೆ ಸರಿದಿದ್ದ ಆರ್ಜೆಂಟೀನಾ!
ಮೂಲತಃ ಇದು ಬ್ರಝಿಲ್‌ ಆತಿಥ್ಯದ ಟೂರ್ನಿ ಆಗಿರಲಿಲ್ಲ. ಕೂಟದ ಆರಂಭಕ್ಕೆ ಇನ್ನೇನು 2 ವಾರ ಇದೆ ಎನ್ನುವಾಗ ಕೊಲಂಬಿಯಾ-ಆರ್ಜೆಂಟೀನಾ ಆತಿಥ್ಯದಿಂದ ಹಿಂದೆ ಸರಿದವು. ಕೊರೊನಾ ತೀವ್ರತೆಯಿಂದಾಗಿ ಅನೇಕ ಆಟಗಾರರು ಕೂಟವನ್ನು ವಿರೋಧಿಸಿ ಪ್ರತಿಭಟನೆಯನ್ನೂ ನಡೆಸಿದರು. ಸುಮಾರು 5,32,000ದಷ್ಟು ಕೊರೊನಾ ಸಾವನ್ನು ಕಂಡ ಬ್ರಝಿಲ್‌ಗೆ ಆತಿಥ್ಯ ನೀಡುವುದಕ್ಕೂ ವಿರೋಧ ವ್ಯಕ್ತವಾಯಿತು. ಆದರೆ ಬ್ರಝಿಲ್‌ ಇದನ್ನು ಸವಾಲಾಗಿ ಸ್ವೀಕರಿಸಿತು.
ಮುಂದಿನದ್ದೆಲ್ಲ ಇತಿಹಾಸ.

Advertisement

Udayavani is now on Telegram. Click here to join our channel and stay updated with the latest news.

Next