Advertisement

ಕೂಳೂರು ಹಳೆ ಸೇತುವೆ ದುರಸ್ತಿ: ಫೆ. 20ರಿಂದ 10 ದಿನ ಸಂಚಾರ ಬಂದ್‌ ಸಾಧ್ಯತೆ

10:57 PM Feb 07, 2020 | Sriram |

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ 68 ವರ್ಷಗಳ ಹಳೆಯ ಕಮಾನು ಸೇತುವೆಯ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

Advertisement

ಕಾಮಗಾರಿಗೆ ಸುಮಾರು 10 ದಿನ ಅವಶ್ಯವಿದ್ದು, ಫೆ. 20ರಿಂದ ಸೇತುವೆಯಲ್ಲಿ ಸಂಚಾರ ನಿಷೇಧಿಸುವಂತೆ ರಾ.ಹೆ. ಪ್ರಾಧಿಕಾರವು ದ.ಕ. ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಮತ್ತು ಸಂಚಾರ ಪೊಲೀಸರ ಉಪಸ್ಥಿತಿಯಲ್ಲಿ ಸಭೆ ನಡೆಸಿ ದಿನಾಂಕ ಅಂತಿಮಗೊಳಿಸಲಾಗುತ್ತದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಕೂಳೂರಿನಲ್ಲಿ ಈಗಿರುವ ಎರಡು ಸೇತುವೆಗಳ ನಡುವೆ ಹೊಸದಾಗಿ 6 ಲೇನ್‌ನ, 66 ಕೋ.ರೂ. ವೆಚ್ಚದ ಸೇತುವೆ ನಿರ್ಮಾಣದ ಪ್ರಸ್ತಾವ ಪ್ರಸ್ತುತ ಎನ್‌ಎಚ್‌ಎಐ ಪ್ರಧಾನ ಕಚೇರಿಯಲ್ಲಿದ್ದು, ಅನುಮೋದನೆ ದೊರೆತಿಲ್ಲ. ಅನುಮೋದನೆಯಾಗಿ ಕಾಮಗಾರಿ ಪೂರ್ಣಗೊಳ್ಳಲು 2-3 ವರ್ಷ ಅಗತ್ಯವಿರುವ ಕಾರಣ ಕಮಾನು ಸೇತುವೆಯನ್ನು ದುರಸ್ತಿ ಮಾಡಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಒಟ್ಟು 38 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.

ಸಂಚಾರ ನಿಷೇಧದ ಅವಧಿಯಲ್ಲಿ ಬದಲಿ ವ್ಯವಸ್ಥೆ ಕೈಗೊಳ್ಳಲು ಪ್ರಾಧಿಕಾರ ಆದ್ಯತೆ ನೀಡಲಿದೆ. ಉಡುಪಿ ಕಡೆಯಿಂದ ಬರುವ ವಾಹನಗಳು ಕಮಾನು ಸೇತುವೆಗೆ ಮೊದಲೇ ಬಲಕ್ಕೆ ತಿರುಗಿ ಕೂಳೂರು ಹೊಸ ಸೇತುವೆಯಲ್ಲಿ ಸಂಚರಿಸಿ ಬಳಿಕ ಎಡಬದಿಯ ಹೊಸ ಸಂಪರ್ಕ ರಸ್ತೆಯಲ್ಲಿ ತೆರಳಿ ಮೇಲ್ಸೇತುವೆ ಮೂಲಕ ಸಾಗಬೇಕು. ಇದಕ್ಕಾಗಿ ಅಯ್ಯಪ್ಪ ದೇವಸ್ಥಾನದ ಬಳಿ ಡಾಮರು ಹಾಕಿ ವ್ಯವಸ್ಥೆ ಮಾಡಲಾಗುತ್ತಿದೆ.

“ಅಪಾಯ’ದ ಸೇತುವೆಗೆ ದುರಸ್ತಿ ಭಾಗ್ಯ!
ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೈದರಾಬಾದ್‌ನ “ಮೆಸರ್ಸ್‌ ಆರ್ವಿ ಅಸೋಸಿ ಯೇಟ್ಸ್‌’ ಏಜೆನ್ಸಿಯ ಮೂಲಕ ಹಳೆಯ ಕಮಾನು ಸೇತುವೆಯ ಮೇಲ್ಭಾಗ, ಕೆಳಭಾಗದ ತಪಾಸಣೆ, ದಾಖಲೆ ಮತ್ತು ಮಾದರಿ ಪರಿಶೀಲನೆ ನಡೆಸಿತ್ತು. ಅದು “ಪ್ರಯಾಣಕ್ಕೆ ಅಯೋಗ್ಯ’ ಎಂದು 2018ರಲ್ಲಿ ವರದಿ ನೀಡಿತ್ತು. ಭಾರತ್‌ಮಾಲಾ ಯೋಜನೆಯ ಸರ್ವೇ ನಡೆಸುತ್ತಿರುವ ತಜ್ಞರ ತಂಡವೂ ಸೇತುವೆ ಸಂಚಾರಕ್ಕೆ ಯೋಗ್ಯವಲ್ಲ ಎಂದಿತ್ತು. ಆದ್ದರಿಂದ ಅದರಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಬೇಕು ಎಂದು ರಾ.ಹೆ. ಪ್ರಾಧಿಕಾರವು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಸಂಚಾರ ನಿರ್ಬಂಧಿಸುವ ಬಗ್ಗೆ ಕಳೆದ ವರ್ಷ ಅಂದಿನ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಪ್ರಕಟಿಸಿದ್ದರಾದರೂ ಅದು ಜಾರಿಯಾಗಲಿಲ್ಲ. ಈಗ ದುರಸ್ತಿ ಭಾಗ್ಯ ದೊರೆಯಲಿದೆ.

Advertisement

ಕೂಳೂರಿನ ಹಳೇ ಕಮಾನು ಸೇತುವೆಯ ದುರಸ್ತಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಲವು ದಿನ ಸಂಚಾರ ನಿಷೇಧಿಸುವಂತೆ ರಾ.ಹೆ. ಪ್ರಾಧಿಕಾರದಿಂದ ಪತ್ರ ಬಂದಿದೆ. ಸಂಚಾರ ಬದಲಾವಣೆಗೆ ಕ್ರಮ ಕೈಗೊಳ್ಳಬೇಕಾದ ಕಾರಣ ಕೆಲವೇ ದಿನದಲ್ಲಿ ಸಂಚಾರ ಪೊಲೀಸರ ಜತೆಗೆ ಸಭೆ ನಡೆಸಿ, ಪರ್ಯಾಯ ವ್ಯವಸ್ಥೆ ಸಿದ್ಧಪಡಿಸಿ ದಿನಾಂಕ ಪ್ರಕಟಿಸಲಾಗುವುದು.
– ಸಿಂಧೂ ಬಿ. ರೂಪೇಶ್‌,
ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next