ಕಾಸರಗೋಡು : ಮಳೆಯ ಅಬ್ಬರದಿಂದಾಗಿ ಮುಂದೂಡಲಾಗಿದ್ದ ಕೂಡ್ಲು ಗ್ರಾಮೋತ್ಸವ ಬಹಳ ವಿಜೃಂಭಣೆಯಿಂದ ರವಿವಾರ ಜರಗಿತು. ಕೂಡ್ಲು ಪ್ರದೇಶದ ಹನ್ನೊಂದು ಕ್ಲಬ್‌ಗಳು ಹಾಗೂ ಕುಟುಂಬ ಶ್ರೀ, ವಿವಿಧ ಸಂಘ ಸಂಸ್ಥೆಗಳು, ಮಕ್ಕಳು, ಹಿರಿಯರು ಭೇದವಿಲ್ಲದೆ ಗ್ರಾಮಸ್ಥರು ಒಂದಾಗಿ ಇಡೀ ದಿವಸವನ್ನು ಜಾನಪದ ಕ್ರೀಡಾ ಆವಿಷ್ಕಾರಗಳಿಗಾಗಿ ಮೀಸಲಿಟ್ಟರು. ಛತ್ರಪತಿ ಕೂಡ್ಲು ಇವರ ನೇತೃತ್ವದಲ್ಲಿ ಬೆಳಗ್ಗಿನಿಂದ ಸಂಜೆ ತನಕ ಕೂಡ್ಲು ಶ್ರೀ ಶೇಷವನ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಪರಿಸರದಲ್ಲಿ ಎರಡನೇ ವರ್ಷದ ಕೂಡ್ಲು ಗ್ರಾಮೋತ್ಸವ -2019 ಜರಗಿತು.
ಜಿಲ್ಲಾ ಪಂಚಾಯತ್ ಸದಸ್ಯ, ನ್ಯಾಯವಾದಿ ಕೆ. ಶ್ರೀಕಾಂತ್ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಟ್ರಸ್ಟಿ ವೇಣುಗೋಪಾಲ ಮಾಸ್ಟರ್ ಉಪಸ್ಥಿತರಿದ್ದರು.
ಶಿವಮಂಗಲ ಶ್ರೀ ಸದಾಶಿವ ಕ್ಷೇತ್ರದ ಅರ್ಚಕರಾದ ನಾಗೇಂದ್ರ ಭಟ್ ಅಧ್ಯಕ್ಷತೆ ವಹಿಸಿದರು. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಸದಸ್ಯೆ ಲೀಲ, ಮಧೂರು ಪಂಚಾಯತ್ ಸದಸ್ಯ ವೆಂಕಟರಮಣ ಅಡಿಗ ಮೊದಲಾದವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ 2019ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗಳಿಸಿದ ವಿದ್ಯಾರ್ಥಿಗಳಿಗೆ, ಚಿನ್ಮಯ ಟ್ರಸ್ಟ್ ನಡೆಸಿದ ರಾಜ್ಯಮಟ್ಟದ ಭಗವದ್ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಗೆ, ಕೃಷಿಕರಿಗೆ ಹಾಗೂ ರಾಜ್ಯಕ್ಕಾಗಿ ಸೇವೆ ಸಲ್ಲಿಸಿದ, ನಿವೃತ್ತಿ ಹೊಂದಿದ ಊರಿನ ಸೈನಿಕರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಬಿಸಿ ಗಂಜಿ ಊಟದ ವ್ಯವಸ್ಥೆಯನ್ನೂ ಮಾಡಲಾಯಿತು. ಗ್ರಾಮೋತ್ಸವ ಕಳೆದ ಬಳಿಕ ಗದ್ದೆಯಲ್ಲಿ ಛತ್ರಪತಿ ಕೂಡ್ಲು ಗುಂಪಿನ ಸದಸ್ಯರು ಕೃಷಿಯನ್ನು ನಡೆಸಿ ಸಿಗುವ ಭತ್ತವನ್ನು ಪೂರ್ಣವಾಗಿ 2020ರಲ್ಲಿ ದೇವರಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ ನಡೆಯುವ ಅತಿರುದ್ರ ಮಹಾಯಾಗಕ್ಕೆ ನೀಡಲಾಗುವುದು.