ಕೂಡ್ಲಿಗಿ: ಕೂಡ್ಲಿಗಿ ಪಪಂಯ 2020-21ನೇ ಸಾಲಿನ ಆಯವ್ಯಯ ಪೂರ್ವಸಿದ್ಧತೆ ಸಭೆ ತಹಶೀಲ್ದಾರ್ ಮಹಾಬಲೇಶ್ವರ ಅವರ ನೇತೃತ್ವದಲ್ಲಿ ನಡೆಯಿತು.
ಎಸ್‌ಎಫ್‌ಸಿ ಅನುದಾನ 69 ಲಕ್ಷ ಹಣವನ್ನು ಆಯವ್ಯಯದಲ್ಲಿ ಯಾವ ರೀತಿ ಅನುದಾನವನ್ನು ಮೀಸಲಿಡಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು. 15ನೇ ಹಣಕಾಸು ಯೋಜನೆಯ 3.16 ಕೋಟಿ ಹಣವನ್ನು ಮೀಸಲಿರಿಸಲು ನಿರ್ಧರಿಸಿದ್ದು, ವಿವಿಧ ಯೋಜನೆಗಳ ಬಗ್ಗೆ ಸಭೆಯಲ್ಲಿ ಹಣ ಮೀಸಲಿರಿಸಲು ಚರ್ಚಿಸಲಾಯಿತು.
ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ನೂತನ ಪಟ್ಟಣ ಪಂಚಾಯ್ತಿ ಸದಸ್ಯರು ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಕುಡಿಯುವ ನೀರಿನ ಸಮಸ್ಯೆ ಬಹುದೇಕ ಎಲ್ಲಾ ವಾರ್ಡ್‌ಗಳಲ್ಲಿದ್ದು 2 ದಿನ ಅಥವಾ 3 ದಿನಗಳಿಗೊಮ್ಮೆ ನೀರು ಬರುತ್ತಿರುವುದ್ದರಿಂದ ಜನತೆಗೆ ಈಗ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ ಎಂದು ಪ.ಪಂ ಸದಸ್ಯ ಸಚಿನ್ ಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಪ.ಪಂ ಸದಸ್ಯೆ ಜಯಮ್ಮ ಮಾತನಾಡಿ, ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಊರಮ್ಮ ಜಾತ್ರೆ ಇದ್ದು, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುತ್ತದೆ. ಹೀಗಾಗಿ ಬಡೇಲಡಕು, ಬಂಡೆಬಸಾಪುರ, ಗೋವಿಂದಗಿರಿ ಸಮೀಪವಿರುವ ಕೊಳವೆಬಾವಿಗಳನ್ನು ಸರಿಪಡಿಸಿ ಕುಡಿಯುವ ನೀರಿನ ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತಾಲೂಕಿನ ಜನತೆಗೆ ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗಲು ಮೊದಲು ಕುಡಿಯವ ನೀರಿನ ಸರಬರಾಜು ಮಾಡಬೇಕೆಂದು ಪಪಂ ಸದಸ್ಯ ತ್ರಿಮೂರ್ತಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಪ.ಪಂ ಮುಖ್ಯಾಧಿಕಾರಿ ಪಕ್ರುದ್ದೀನ್ ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಈಶಪ್ಪ ಅವರು, ಪಟ್ಟಣದ ವಿವಿಧ ಚರಂಡಿಗಳ, ಬೀದಿದೀಪಗಳ ಕುರಿತು ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು.
ಪಟ್ಟಣದಲ್ಲಿ ಹಂದಿಗಳ ಹಾವಳಿ ಜಾಸ್ತಿಯಾಗಿದ್ದು, ಇವುಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡು ಪಟ್ಟಣವನ್ನು ಶುಚಿಯಾಗಿಡಲು ಕ್ರಮಕೈಗೊಳ್ಳಬೇಕು ಎಂದರು.
ತಹಶೀಲ್ದಾರ್ ಮಹಾಬಲೇಶ್ವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಫಕ್ರುದ್ದೀನ್, ಕಂದಾಯ ಅಧಿಕಾರಿ ರಾಘವೇಂದ್ರ, ಲೆಕ್ಕ ಪರಿಶೋಧಕ ಗುರುರಾಜ, ಪ.ಪಂ ಸದಸ್ಯರಾದ ತಳಾಸ ವೆಂಕಟೇಶ, ಸಚಿನ್ ಕುಮಾರ್, ಬಿ.ಎಂ.ತ್ರಿಮೂರ್ತಿ, ಚಂದ್ರು ಪಿ, ಕೆ.ಈಶಪ್ಪ, ಶುಕುರ್, ಪೂರ್ಯಾನಾಯ್ಕ, ಬಾಸುನಾಯ್ಕ ಹಾಗೂ ಕೊತ್ಲಪ್ಪ ಎಚ್. ಸೇರಿದಂತೆ ಪಟ್ಟಣ ಪಂಚಾಯ್ತಿ ಸದಸ್ಯರು ಭಾಗವಹಿಸಿದ್ದರು.