ಉಡುಪಿ: ಪುಣೆ ಫಿಲಂ ಇನ್‌ಸ್ಟಿಟ್ಯೂಟ್ ಪದವೀಧರ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ| ಕೆ.ರಮೇಶ್ ಕಾಮತ್ ಅವರ ಕಥೆ, ಚಿತ್ರಕಥೆ, ಗೀತೆ ರಚನೆ ಮತ್ತು ನಿರ್ದೇಶನದ ಕೊಂಕಣಿ ಭಾಷೆಯ ಹೊಸ ಚಲನಚಿತ್ರ “ಅಂತ್ಯಾರಂಭ’ ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕಲನವೂ ಮುಗಿದಿದೆ. ರಿ-ರೆಕಾರ್ಡಿಂಗ್ ಕಾರ್ಯ ಬಾಕಿ ಇದ್ದು, ನವೆಂಬರ್ ಮೊದಲ ವಾರ ಸಿನೆಮಾ ತೆರೆ ಕಾಣಲಿದೆ ಎಂದು ನಿರ್ದೇಶಕ ಡಾ| ಕೆ. ರಮೇಶ್ ಕಾಮತ್ ತಿಳಿಸಿದ್ದಾರೆ.
ಚಲನಚಿತ್ರವು ಆದಿತ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಕಿರಣ್ಮಯಿ ಕಾಮತ್ ನಿರ್ಮಾಣದಲ್ಲಿ ಚಿತ್ರ ತೆರೆ ಕಾಣಲಿದೆ. ಕೊಂಕಣಿ ಮತ್ತು ಸಾರಸ್ವತ ಕೊಂಕಣಿಯಲ್ಲಿ ಇದುವರೆಗೆ ತಯಾರಾದುದು ಕೇವಲ ಎಂಟು ಚಿತ್ರಗಳು. ಅದರಲ್ಲಿ ಮೂರನ್ನು ಡಾ| ರಮೇಶ್ ಕಾಮತ್ ಅವರೇ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಕೇವಲ ಭಾಷಾ ಅಭಿಮಾನದಿಂದ ತಮ್ಮ 72ನೇ ವಯಸ್ಸಿನಲ್ಲಿ ನಾಲ್ಕನೇ ಕೊಂಕಣಿ ಸಿನೆಮಾ “ಅಂತ್ಯಾರಂಭ’ವನ್ನು ನಿರ್ದೇಶಿಸುತ್ತಿದ್ದಾರೆ.
“ಅಂತ್ಯಾರಂಭ’ ಸಾಮಾನ್ಯ ಮನೋರಂಜನಾತ್ಮಕ ಚಿತ್ರವಾಗಿರದೆ, ಒಂದು ತತ್ವಾಧಾರಿತ ಕಲಾತ್ಮಕ ಚಿತ್ರವಾಗಲಿದೆ. ಜೀವನದ ವಿವಿಧ ಹಂತಗಳಲ್ಲಿ ಮಾನವನಿಗೆ ಹಲವಾರು ಕಷ್ಟ, ಸಂಕಷ್ಟ ಎದುರಾಗುತ್ತವೆ. ಅದಕ್ಕೆ ಹೆದರಿ, ಅದುವೇ ಜೀವನದ ಅಂತ್ಯ ಎಂದು ಭಾವಿಸುತ್ತಾನೆ. ಈ ಸಿನೆಮಾದ ಮೂಲಕ ಜೀವನ ಪಯಣದಲ್ಲಿ ಅಂತ್ಯ ಎಂಬುದೇ ಇಲ್ಲ. ಅದು ಹೊಸ ಆರಂಭಕ್ಕೆ ನಾಂದಿ ಹಾಡುತ್ತದೆ ಎಂಬುದನ್ನು ತಿಳಿಸುವ ಪ್ರಯತ್ನ ಆಗಲಿದೆ.
ಸಿನೆಮಾದ ಪ್ರಮುಖ ಪಾತ್ರದಲ್ಲಿ ಹಿರಿಯ ವೃದ್ಧ ನಾಯಕನ ಪಾತ್ರದಲ್ಲಿ ಡಾ| ರಮೇಶ್ ಕಾಮತ್, ಯುವ ನಾಯಕನಾಗಿ ದಾಮೋದರ್ ನಾಯಕ್, ಯುವ ನಾಯಕಿಯಾಗಿ ಪ್ರತೀಕ್ಷಾ ಕಾಮತ್, ವಿಟೋಬ ಭಂಡಾರ್‌ಕರ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟಾನಿ ಆಲ್ವಾರೀಸ್, ಪ್ರಖ್ಯಾತ ಯಕ್ಷಿಣಿಗಾರ ಉದಯ್ ಜಾದೂಗಾರ್, ಶೀಲಾ ನಾಯಕ್, ಮುಂಬಯಿಯ ವಸುಧಾ ಪ್ರಭು, ಅನಂತ್ ನಾಯಕ್ ಸಗ್ರಿ, ನರಸಿಂಹ ನಾಯಕ್, ಮಾಸ್ಟರ್ ಆದಿತ್ಯ ನಾಯಕ್, ಮಾಸ್ಟರ್ ಯಥಾರ್ಥ, ಸಂದೀಪ್ ಮಲಾನಿ, ಪ್ರಕಾಶ್ ಕಿಣಿ, ಉಮೇಶ್ ಶೆಣೈ, ಕೃಷ್ಣ ನಾಯಕ್, ಆನಂದ ನಗರ್ಕರ್, ಮಣಿಪಾಲದ ವಿನುತಾ ಕಿರಣ್, ಗೋವಿಂದರಾಯ್ ಶಾನುಭಾಗ್ ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಚಿತ್ರಗ್ರಾಹಕರಾಗಿ ಪಿವಿಆರ್ ಸ್ವಾಮಿ, ಸಂಕಲನಕಾರರಾಗಿ ನಾಗೇಶ್, ಸಂಗೀತ ನಿರ್ದೇಶಕರಾಗಿ ಸುರೇಶ್, ಗಾಯಕರಾಗಿ ಶಂಕರ್ ಶಾನುಭಾಗ್ ಮತ್ತು ಸಂಭಾಷಣೆ ಶಾ.ಮಂ.ಕೃಷ್ಣ ರಾಯರು ನಡೆಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.