ಉಡುಪಿ: ಕೊಂಕಣಿ ಭಾಷಿಗರಲ್ಲಿ ಅದ್ಭುತ ಸಂಸ್ಕೃತಿ ಅಡಗಿದೆ. ಇದಕ್ಕೆ 3,000 ವರ್ಷಗಳ ಹಿಂದಿನ ಇತಿಹಾಸ ಸಿಗುತ್ತದೆ. ಇದನ್ನು ನಾವು ನಮ್ಮ ಮಕ್ಕಳಿಗೆ ಹಸ್ತಾಂತರಿಸಬೇಕಾದ ಅಗತ್ಯವಿದೆ. ನಾವು ಆಡುವ ಭಾಷೆಯಲ್ಲಿ ವ್ಯತ್ಯಾಸ ಇರಬಹುದು. ಆದರೆ ನಮ್ಮೆಲ್ಲರ ಮನಸ್ಸು ಒಂದೇ ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಹೇಳಿದರು.
ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ರವಿವಾರ ಅಪರಾಹ್ನ ನಡೆದ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಸಾಮರ್ಥ್ಯ ಇದೆ. ಆದರೆ ಇದು ಹೊರಹೊಮ್ಮಲು ಸೂಕ್ತ ಅವಕಾಶ ಸಿಗುವುದಿಲ್ಲ. ಸ್ವಲ್ಪ ವಾಸ್ತವ, ಸ್ವಲ್ಪ ಕಲ್ಪನೆ ಸೇರಿ ಕಥೆಯೊಂದು ರೂಪುಗೊಳ್ಳುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ನಡೆದ ಒಂದೊಂದು ಚಿಕ್ಕ, ಚಿಕ್ಕ ಘಟನೆಯ ಹಿನ್ನೆಲೆಯನ್ನು ಹುಡುಕಿ ತೆಗೆದರೆ ಅದೇ ಒಂದು ರೋಚಕ ಕಥೆಯಾಗುತ್ತದೆ. ಇಲ್ಲಿ ನಾವು ಇಷ್ಟೊಂದು ಜನ ಒಟ್ಟುಗೂಡಿದ್ದೇವೆ. ಬಹುಶಃ ಈ ಪ್ರಪಂಚದಲ್ಲಿ ನಮ್ಮ ಜನಾಂಗದಷ್ಟು ದೊಡ್ಡ ಕಥೆ ಬೇರೆಲ್ಲೂ ಸಿಗಲಿಕ್ಕಿಲ್ಲ ಎಂದರು.
ನಮ್ಮ ಕಥೆ ಗೋವಾದಿಂದ ಆರಂಭವಾಗುತ್ತದೆ ಎನ್ನುತ್ತಾರೆ. ಆದರೆ ಇದು ಕೇವಲ 600 ವರ್ಷಗಳ ಹಿಂದಿನ ಕಥೆ. ಇದಕ್ಕೂ ಹಿಂದಿನ ನಮ್ಮ ಕಥೆಯನ್ನು ಅವಲೋಕಿಸಲು ತೊಡಗಿದರೆ ಇನ್ನೂ ದೊಡ್ಡ ಇತಿಹಾಸ ಗೋಚರಿಸುತ್ತದೆ. ನಾವು ಗಾಂಧಾರದಿಂದ ಬಂದವರು ಎನ್ನಲಾಗುತ್ತಿದೆ. ಇದಕ್ಕೂ ಹಿಂದೆ ಎಲ್ಲಿದ್ದೆವು ಎಂದು ಅವಲೋಕಿಸಿದಾಗ ಸರಸ್ವತಿ ನದಿ ತೀರದ ಕಥೆ ಆರಂಭಗೊಳ್ಳುತ್ತದೆ. ಇಲ್ಲಿ ನೆಲೆಸಿದ್ದ ಬುದ್ಧಿವಂತ, ಅತ್ಯಂತ ಪ್ರಜ್ಞಾವಂತ, ವೈದಿಕ ಶಾಸ್ತ್ರ ಪಾರಂಗತ ಜನಾಂಗ, ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಜನಾಂಗ ನಮ್ಮದಾಗಿತ್ತು. ಪ್ರಾಕೃತಿಕ ವೈಪರೀತ್ಯ ಹಾಗೂ ಇನ್ನಿತರ ಕಾರಣಗಳಿಂದ ಸಣ್ಣ ಸಣ್ಣ ಗುಂಪುಗಳಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಹಂಚಿಹೋದೆವು. ಕಾಶ್ಮೀರ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್…ಹೀಗೆ. ಕೊನೆಯದಾಗಿ ನಾವು ನೆಲೆ ನಿಂತದ್ದು ಗೋವಾದಲ್ಲಿ. ಅಲ್ಲಿ ಏನಾಯಿತು ಎಂಬುದು ನಮಗೆಲ್ಲ ತಿಳಿದಿದೆ. ಹೀಗೆ ನಮ್ಮ ಪೂರ್ವವನ್ನು ಹುಡುಕಿ ತೆಗೆದರೆ ಅದು ಕೆಲವು ಮೂರು ಸಾವಿರ ವರ್ಷಗಳ ಮಹಾಪಯಣದ ಕಥೆಯನ್ನು ಸಾರುತ್ತದೆ ಎಂದು ಅವರು ಹೇಳಿದರು.
ಮಂಗಳೂರಿನ ವೆಂಕಟೇಶ ಬಾಳಿಗಾ, ಮೆಲ್ವಿನ್ ರೋಡ್ರಿಗಸ್, ಕಾರ್ಕಳದ ಕೆ.ಪಿ.ಶೆಣೈ, ಉಡುಪಿಯ ಸಂಧ್ಯಾ ಶೆಣೈ ಅವರ ಅಧ್ಯಕ್ಷತೆಯಲ್ಲಿ ವಿವಿಧ ಗೋಷ್ಠಿಗಳು ನಡೆದವು.
ಪ್ರತಿಭೆ ಅನಾವರಣ :
ಸಮ್ಮೇಳನದ ನಡುವೆ ಪೆರ್ನಾಲಿನ ರಾಜೇಶ ಪ್ರಭು ಅವರು ಕೆಲವೇ ಸೆಕೆಂಡುಗಳಲ್ಲಿ ಹಲ್ಲಿನಲ್ಲಿ ಕಚ್ಚಿ ತೆಂಗಿನ ಕಾಯಿಯ ಸಿಪ್ಪೆಯನ್ನು ತೆಗೆದು ಸಭಾಸದರ ಚಪ್ಪಾಳೆ ಗಿಟ್ಟಿಸಿಕೊಂಡರು.