Advertisement

ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ, ಬೌದ್ಧಿಕ ಸಂಪತ್ತು

05:00 AM Nov 19, 2018 | Team Udayavani |

ಮಂಗಳೂರು: ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರದ 2018ನೇ ಸಾಲಿನ ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ’ ಹಾಗೂ ‘ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಸಹಿತ ಐದು ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಜರಗಿತು. ಬೆಂಗಳೂರಿನ ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಅಧ್ಯಕ್ಷ, ಚಿಂತಕ ಹಾಗೂ ಪ್ರಶಸ್ತಿ ಪ್ರಾಯೋಜಕ ಟಿ.ವಿ. ಮೋಹನ್‌ದಾಸ್‌ ಪೈ ಅವರು ಮಾತನಾಡಿ, ಭಾರತೀಯ ಸಂಪ್ರದಾಯದಲ್ಲಿ ಜ್ಞಾನಕ್ಕೇ ಹೆಚ್ಚು ಗೌರವ. ರಾಜಸಭೆಗೆ ರಾಜಗುರು ಪ್ರವೇಶಿಸಿದ ಕೂಡಲೇ ರಾಜನೇ ಎದ್ದು ಬಂದು ನಮಸ್ಕರಿಸುತ್ತಾನೆ. ಇತರ ಕಡೆಗಳಲ್ಲಿ ಇರುವಂತೆ ತೋಳ್ಬಲಕ್ಕೆ ಇಲ್ಲಿ ಪ್ರಾಶಸ್ತ್ಯ ನೀಡಿಲ್ಲ. ಜ್ಞಾನ ಸಂಪತ್ತು ಹಾಗೂ ಬೌದ್ಧಿಕ ಸಂಪತ್ತಿಗೆ ಭಾರತೀಯ ಸಂಸ್ಕೃತಿ ಹೆಚ್ಚಿನ ಒತ್ತು ನೀಡಿದೆ ಎಂದು ಹೇಳಿದರು. ಸಾಹಿತಿ ಬಿ. ಗೋಪಾಲಕೃಷ್ಣ ಪೈ ಬೆಂಗಳೂರು ಅವರು ಮುಖ್ಯ ಅತಿಥಿಗಳಾಗಿದ್ದರು.

Advertisement

ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿದರು. ಪ್ರಮುಖರಾದ ಸಿ.ಡಿ. ಕಾಮತ್‌, ಪ್ರದೀಪ್‌ ಜಿ. ಪೈ, ನಾರಾಯಣ ನಾಯಕ್‌, ಪಾರ್ವತಿ ಬಾಯಿ, ಕೆ.ಬಿ. ಖಾರ್ವಿ, ಮಾಲತಿ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು. ಶಕುಂತಳಾ ಆರ್‌. ಕಿಣಿ ಅವರು ವಂದಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪುರಸ್ಕೃತರು
ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ-2018 ಅನ್ನು ಕೊಂಕಣಿ ಲೇಖಕ ಎಚ್‌.ಎಂ. ಪೆರ್ನಾಳ (ಹೆನ್ರಿ ಮೆಂಡೋನ್ಸಾ) ಅವರ “ಬೀಗ ಆನಿ ಬಿಗಾತ’ ಸಣ್ಣ ಕಥೆ ಪುಸ್ತಕಕ್ಕೆ ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಕವಿತಾ ಕೃತಿ ಪುರಸ್ಕಾರವು ಲೇಖಕ ಶರಚ್ಚಂದ್ರ ಶೆಣೈ ಕೊಚ್ಚಿ ಅವರ “ಇದಂ ನ ಮಮ’ ಕವಿತಾ ಸಂಗ್ರಹಕ್ಕೆ ಹಾಗೂ ಕೊಂಕಣಿ ಸಾಂಸ್ಕೃತಿಕ ರಾಯಭಾರಿ, ಕೊಂಕಣಿ ಸಾಹಿತ್ಯದಲ್ಲಿ ಭಾಮಿನಿ ಷಟ³ದಿಯ ಪ್ರಥಮ ಮಹಾಕಾವ್ಯ “ಶ್ರೀರಾಮಚರಿತ’ ಬರೆದ ವಿಶ್ವನಾಥ ಶೇಟ್‌ ಹಾರ್ಸಿಕಟ್ಟೆ ಅವರಿಗೆ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು.  ಹಿರಿಯ ಸಮಾಜ ಸೇವಕಿ ಡಾ| ಪಿ. ಗೌರಿ ಪೈ ಪುತ್ತೂರು ಹಾಗೂ ಮಂಗಳೂರಿನ ಖ್ಯಾತ ಡಾ| ಯು. ವಿ. ಶೆಣೈ ಅವರಿಗೆ “ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 1 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next