Advertisement

ಸೆ. 8; ಕೊಂಕಣಿ ಕೆಥೋಲಿಕರ ಹಬ್ಬ “ಮೊಂತಿ ಫೆಸ್ತ್’

06:46 PM Sep 06, 2019 | mahesh |

ಮಹಾನಗರ: ಕರಾವಳಿ ಕರ್ನಾಟಕದ ಕೊಂಕಣಿ ಕೆಥೋಲಿಕರಿಗೆ ಸೆ. 8 ವಿಶೇಷ ದಿನ; ಅಂದು ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮ ದಿನವಾಗಿದ್ದು, ಅದನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೊಂಕಣಿ ಕೆಥೋಲಿಕರು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.

Advertisement

ಅಂದು ಮೇರಿ ಮಾತೆಯ ಜಯಂತಿಯ ಜತೆಗೆ ಕೌಟುಂಬಿಕ ಸಮ್ಮಿಲನದ ದಿನ, ಹೊಸ ಬೆಳೆಯ ಹಬ್ಬ ಹಾಗೂ ಹೆಮ್ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಪ್ಟೆಂಬರ್‌ ತಿಂಗಳು ಮಳೆಗಾಲದ ಕೊನೆಯ ಅವಧಿಯಾಗಿದ್ದು, ಈ ಸಂದರ್ಭದಲ್ಲಿ ಪ್ರಕೃತಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತದೆ. ಬೆಳೆಗಳು ಹುಲುಸಾಗಿ ಬೆಳೆದು, ನಳ ನಳಿಸಿ, ಕೊಯ್ಲಿಗೆ ಸಿದ್ಧವಾಗಿರುತ್ತವೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಲು ವಿವಿಧ ಆಚರಣೆಗಳು ನಡೆಯುತ್ತವೆ. ಕರಾವಳಿಯಲ್ಲಿ ಪ್ರಕೃತಿ ಮಾತೆಯನ್ನು ವಿಶಿಷ್ಟ ರೀತಿಯಲ್ಲಿ ವಂದಿಸಲಾಗುತ್ತದೆ. ಕೊಂಕಣಿ ಕೆಥೋಲಿಕರು ಇದನ್ನು “ಮೊಂತಿ ಫೆಸ್ತ್’ ಆಗಿ ಆಚರಿಸಿ ಸಂಭ್ರಮಿಸುತ್ತಾರೆ.

ಈ ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್‌ಗಳಲ್ಲಿ 9 ದಿನಗಳ ನೊವೇನಾ ಪ್ರಾರ್ಥನೆಯ ಕಾರ್ಯಕ್ರಮ ಆ. 30 ರಂದು ಆರಂಭವಾಗಿದೆ. ನೊವೇನಾ ಪ್ರಾರ್ಥನೆಯ ವೇಳೆ ಪ್ರತಿ ದಿನ ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ (ಬಾಲೆ ಮೇರಿಯ ಮೂರ್ತಿಗೆ) ಸಮರ್ಪಿಸಿ, ಗೀತೆಗಳನ್ನು ಹಾಡುವ ಮೂಲಕ ಸ್ತುತಿಸಿದ್ದಾರೆ.

ಕೊನೆಯ ದಿನ ಅಂದರೆ ಸೆ. 8 ರಂದು ಹಬ್ಬದ ಸಂಭ್ರಮ. ಚರ್ಚ್‌ಗಳಲ್ಲಿ ಬಲಿ ಪೂಜೆ, ಹೊಸ ತೆನೆಯ ಆಶೀರ್ವಚನ ಮತ್ತು ವಿತರಣೆ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಕ್ರೈಸ್ತರಿಂದ ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಕೌಟುಂಬಿಕವಾಗಿ ಹಬ್ಬದ ಭೋಜನ ಕಾರ್ಯಕ್ರಮ ನಡೆಯುತ್ತದೆ.

ಸಸ್ಯಹಾರಿ ಊಟ
ಸಸ್ಯಾಹಾರಿ ಭೋಜನ ಈ ಹಬ್ಬದ ವೈಶಿಷ್ಟ್ಯ. ಕನಿಷ್ಠ 5 ಬಗೆಯ ಸಸ್ಯಾಹಾರಿ ಐಟಂ ಗಳಾದರೂ ಇರ ಬೇಕು ಎನ್ನುವುದು ರೂಢಿ. ಅದರಲ್ಲೂ “ಅಳು” (ಕೆಸುವಿನ ದಂಟು), “ದೆಂಟೊ’ (ಹರಿವೆ ದಂಟು), ಹೀರೆ, ಬೆಂಡೆ ಕಾಯಿಗೆ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ.

Advertisement

ಹಿಂದೂಗಳ ಚೌತಿ ಹಬ್ಬದಂತೆ ಕೆಥೋಲಿಕರ ಮೊಂತಿ ಹಬ್ಬದಲ್ಲಿಯೂ ಸ್ಥಳೀಯ ತರಕಾರಿಗೆ ಪ್ರಾಮುಖ್ಯತೆ ಇದೆ. ಸಪ್ಟೆಂಬರ್‌ ತಿಂಗಳ ಮೊದಲ ವಾರದಲ್ಲಿ ಸಾಮಾನ್ಯವಾಗಿ ತರಕಾರಿ ಮತ್ತು ಇತರ ಬೆಳೆಗಳು ಹುಲುಸಾಗಿ ಬೆಳೆದಿರುತ್ತವೆ. ಹಾಗಾಗಿ ಸ್ಥಳೀಯ ತರಕಾರಿಗೆ ಆದ್ಯತೆ ನೀಡಲಾಗುತ್ತದೆ.

ಮಳೆಯ ಪರಿಣಾಮ ತರಕಾರಿ ಕೊರತೆ
ಈ ವರ್ಷ ವಿಪರೀತ ಮಳೆಯ ಕಾರಣ ತರಕಾರಿ ಫಸಲು ಕುಂಠಿತವಾಗಿದೆ. ಹಾಗಾಗಿ ಪೂರೈಕೆಯಲ್ಲಿ ಏರು ಪೇರಾಗಿದೆ. ಮಂಗಳೂರಿನ ಮಾರುಕಟ್ಟೆಯಲ್ಲಿ ಶುಕ್ರವಾರ ಬೇಡಿಕೆಯ ಶೇ. 50 ರಷ್ಟು ತರಕಾರಿಯ ಕೊರತೆ ಕಂಡು ಬಂದಿತ್ತು. ಹೀಗೆ ತರಕಾರಿ ಪೂರೈಕೆಯಲ್ಲಿ ಕೊರತೆ ಉಂಟಾಗಿರುವ ಕಾರಣ ಕೆಲವು ತರಕಾರಿಗಳ ಬೆಲೆ ಹೆಚ್ಚಳವಾಗಿದೆ.

ಸೆ. 6 ರ ದರಗಳು: ಸ್ಥಳೀಯ ಬೆಂಡೆ 100 ರೂ. (ಸಾಮಾನ್ಯ ದರ 60/ 70 ರೂ.), ಹೀರೆ ಕಾಯಿ 60 ರೂ. (ಸಾಮಾನ್ಯ ದರ 30/40 ರೂ.), ಮುಳ್ಳು ಸೌತೆ 100 ರೂ. (ಸಾಮಾನ್ಯ ದರ 50/ 60 ರೂ.), ತೊಂಡೆ ಕಾಯಿ 100 ರೂ. (ಸಾಮಾನ್ಯ ದರ 60 ರೂ.), ಹರಿವೆ ದಂಟು 50 ರೂ. (ಸಾಮನ್ಯ ದರ 20/ 25 ರೂ.).

ಈ ವರ್ಷ ಮಳೆ ಬಂದದ್ದೇ ವಿಳಂಬವಾಗಿ. ಈಗ ಧಾರಾಕಾರವಾಗಿ ಮಳೆ ಬರುತ್ತಿದೆ. ತರಕಾರಿ ಕೃಷಿಯ ಮೇಲೆ ಇದರ ನೇರ ಪರಿಣಾಮ ಬೀರಿದೆ. ಫಸಲು ಕಡಿಮೆ ಆಗಿದ್ದರಿಂದ ಕೆಲವೊಂದು ತರಕಾರಿಗಳ ತೀವ್ರ ಕೊರತೆ ಇದೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಮೊಂತಿ ಫೆಸ್ತ್ ಆಚರಣೆಗೆ ಆವಶ್ಯವಾಗಿ ಬೇಕಾಗಿರುವ ಕೆಲವೊಂದು ತರಕಾರಿಗಲು ದುಬಾರಿಯಾಗಿವೆ.
– ಡೇವಿಡ್‌ ಡಿ’ಸೋಜಾ, ವಾಮಂಜೂರು,
ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next