ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಮುಂದುವರೆದಿದ್ದು. ಕ್ಷಣಕ್ಷಣಕ್ಕೂ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಹೀಗಾಗಿ ಮತ್ತೊಮ್ಮೆ ಪ್ರವಾಹ ಎದುರಾಗುತ್ತದೆ ಎನ್ನುವ ಭೀತಿ ನದಿ ತೀರದ ಜನರಲ್ಲಿ ಆವರಿಸಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶದ ಹೆಚ್ಚು ಮಳೆ ಬಿಳುವ ಕೋಯ್ನಾ, ಮಹಾಬಲೇಶ್ವರ, ನವಜಾ. ಪಾಟಗಾಂವ,ಕಾಳಮ್ಮವಾಡಿ ಮತ್ತು ಕೊಲ್ಲಾಪೂರ ಸೇರಿದಂತೆ ಚಿಕ್ಕೋಡಿ ಸುತ್ತಮುತ್ತ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ.
ಐದು ಸೇತುವೆಗಳು ಜಲಾವೃತ
ದೂಧಗಂಗಾ ಮತ್ತು ವೇದಗಂಗಾ ನದಿ ತೀರದ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಐದು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿದ್ದು. ಪ್ರಯಾಣಿಕರು ಸುತ್ತುಬಳಸಿ ಪ್ರಯಾಣ ಮಾಡುವುದು ಅನಿವಾರ್ಯ ಆಗಿದೆ.
ಮಹಾರಾಷ್ಟ್ರ ರಾಜಾಪೂರ ಬ್ಯಾರೇಜ್ ದಿಂದ ಕೃಷ್ಣಾ ನದಿಗೆ 70 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ದೂಧಗಂಗಾ ನದಿಯಿಂದ 19 ಸಾವಿರ ಕ್ಯುಸೆಕ್ ನೀರು ಹರಿದು ಕೃಷ್ಣಾ ನದಿಗೆ ಸೇರುತ್ತದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 89 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಬರುವ ನೀರು ಅಷ್ಟೇ ಪ್ರಮಾಣದಲ್ಲಿ ಹಿಪ್ಪರಗಿ ಜಲಾಶಯಕ್ಕೆ ಹೋಗುತ್ತದೆ ಎಂದು ತಹಶೀಲ್ದಾರ ಸಿ.ಎಸ್.ಕುಲಕರ್ಣಿ ಮಾಹಿತಿ ನೀಡಿದರು.