Advertisement
ಉಡುಪಿ ಬುಡ್ನಾರಿನ ಸಿಂಧು ಶೆಟ್ಟಿ ಅವರ 3.08 ಎಕ್ರೆ ಭೂಮಿ ಕೊಂಕಣ ರೈಲ್ವೇಗೆ ಹೋಗಿತ್ತು. ಪುತ್ರಿ ಶಕುಂತಳಾ ಶೆಟ್ಟಿ ಅವರಿಗೆ ಪೇಪರ್ ಸ್ಟಾಲ್ ನಡೆಸಲು ಅನುಮತಿ ನೀಡಲಾಗಿತ್ತು. ಪೇಪರ್ ಸ್ಟಾಲ್‌ಗಳಿಗೆ ಆದ್ಯತೆಯ ನೆಲೆ ಇದೆ. ಸುಮಾರು 15 ವರ್ಷ ನಡೆಸಿದರು. ಕಳೆದ ವರ್ಷ ಈ ಅಂಗಡಿಯನ್ನು ಟೆಂಡರ್‌ಗೆ ಕರೆದರು. ಈಗ ಶಕುಂತಳಾ ಶೆಟ್ಟಿಯವರಿಗೆ ಸ್ಟಾಲ್ ಇಲ್ಲ
Related Articles
Advertisement
ಟ್ರಾಲಿಗಳು ರದ್ದು :
ರೈಲು ನಿಲ್ದಾಣಗಳ ಪ್ಲಾಟ್‌ಫಾರಂಗಳಲ್ಲಿ ಹಣ್ಣು, ಎಳನೀರು ಇತ್ಯಾದಿಗಳನ್ನು ಚಲಿಸಿಕೊಂಡು ಮಾರಾಟ ಮಾಡುವ ಟ್ರಾಲಿಗಳಿಗೆ ಅನುಮತಿ ಕೊಡುವಾಗ, ಟ್ರಾಲಿಗಳನ್ನು ಒಂದೆಡೆ ನಿಲ್ಲಿಸಿಕೊಂಡು ಮಾರಾಟ ಮಾಡುವ ಹಣ್ಣಿನ ಸ್ಟಾಲ್‌ಗಳಿಗೂ ಅನುಮತಿ ಕೊಡುವಾಗ ಭೂ ಸಂತ್ರಸ್ತರ ಕೋಟಾದಡಿ ನೀಡಲಾಯಿತು. ಇವುಗಳಿಂದ ಪ್ರಯಾಣಿಕರಿಗೆ ಅಡೆತಡೆಯಾಗುತ್ತದೆಂಬ ರೈಲ್ವೇ ಬೋರ್ಡ್‌ನ ಶಿಫಾರಸಿನಂತೆ ಮೂರು ವರ್ಷಗಳ ಹಿಂದೆ ರದ್ದುಪಡಿಸಲಾಯಿತು. ಇಂತಹ ಸಂತ್ರಸ್ತರು ಸುಮಾರು 50 ಮಂದಿ ಇದ್ದು, ಅವರಿಗೆ ನಿಲ್ದಾಣದ ಬೇರೆ ಅಂಗಡಿಗಳನ್ನು ನೀಡಬಹುದಾಗಿದ್ದರೂ ಹಾಗೆ ಮಾಡಲಿಲ್ಲ ಎಂಬ ದೂರು ಇದೆ.
ಮಾತನಾಡುವೆ :
ಕೊಂಕಣ ರೈಲ್ವೇಯಲ್ಲಿ ಭೂಸಂತ್ರಸ್ತರಿಗೆ ಉದ್ಯೋಗ, ಭಡ್ತಿ, ಸ್ಟಾಲ್ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ. ಇದುವರೆಗೆ ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. – ಶೋಭಾ ಕರಂದ್ಲಾಜೆ, ಸಂಸದರು, ಉಡುಪಿ ಚಿಕ್ಕಮಗಳೂರು ಕ್ಷೇತ್ರ
ಪಾರದರ್ಶಕತೆ :
ಕೊಂಕಣ ರೈಲ್ವೇ ಮಾರ್ಗದರ್ಶೀ ಸೂತ್ರದಂತೆ ನೇಮಕಾತಿ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿ ನಡೆಯುತ್ತದೆ. ಖಾಲಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಎಲ್ಲ ಪ್ರಕ್ರಿಯೆಗಳಲ್ಲೂ ಪಾರದರ್ಶಕತೆ ಕಾಪಾಡಿಕೊಳ್ಳಲಾಗುತ್ತದೆ. ಶಕುಂತಳಾ ಶೆಟ್ಟಿಯವರು ಟೆಂಡರ್‌ನಲ್ಲಿ ಭಾಗವಹಿಸಬೇಕಿತ್ತು. ಅರ್ಜಿ ಸಲ್ಲಿಸಿದ್ದರೆ ಅವರಿಗೇ ಸಿಗುತ್ತಿತ್ತು. ಅವರ ಸಂಬಂಧಿಯೊಬ್ಬರಿಗೆ ಭೂಸಂತ್ರಸ್ತರ ಕೋಟಾದಲ್ಲಿ ನೌಕರಿ ಸಿಕ್ಕಿದೆ. ಪ್ರಯಾಣಿಕರ ಸುರಕ್ಷೆಗಾಗಿ ರೈಲ್ವೇ ಮಂಡಳಿಯ ನಿರ್ಧಾರದಂತೆ ಇಡೀ ದೇಶದಲ್ಲಿ ಟ್ರಾಲಿಗಳನ್ನು ರದ್ದುಗೊಳಿಸಲಾಯಿತು. – ಸುಧಾ ಕೃಷ್ಣಮೂರ್ತಿ, ಪಿಆರ್‌ಒ, ಕೊಂಕಣ ರೈಲ್ವೇ, ಮಂಗಳೂರು
ಸ್ಟಾಲ್‌ನಂತೆ ಉದ್ಯೋಗ ಕಿತ್ತುಕೊಳ್ಳುತ್ತಾರೋ? :
ಉಡುಪಿ ರೈಲು ನಿಲ್ದಾಣದ ನಮ್ಮ ಪೇಪರ್ ಸ್ಟಾಲ್‌ನಲ್ಲಿ ಮುಖ್ಯವಾಗಿ ಉದಯವಾಣಿ ಸಮೂಹದ ಪತ್ರಿಕೆಗಳನ್ನು ಇರಿಸುತ್ತಿದ್ದೆವು. ಭೂಸಂತ್ರಸ್ತರ ಕೋಟಾದಡಿ ನೀಡಿದ ಸ್ಟಾಲನ್ನು ಏಕಾಏಕಿ ಕಿತ್ತುಕೊಂಡಾಗ ನಾವು ಮಂಗಳೂರಿನ ಹಿರಿಯ ಅಧಿಕಾರಿಗಳಲ್ಲಿ ಕೇಳಿದೆವು. “ನಿಮಗೆ ಭೂಸಂತ್ರಸ್ತರ ಕೋಟಾದಡಿ ಅಂಗಡಿ ಕೊಟ್ಟದ್ದು ಹೌದು. ಇದನ್ನು ವರ್ಷ ವರ್ಷ ನವೀಕರಣ ಮಾಡಲೇಬೇಕೆಂದಿಲ್ಲ’ ಎಂದು ಉತ್ತರಿಸಿದರು. ನಮಗೆ ಟೆಂಡರ್‌ನ ಯಾವ ಮಾಹಿತಿಯೂ ಇದ್ದಿರಲಿಲ್ಲ. ಈಗ ನಾವು ಕೇಳುವ ಪ್ರಶ್ನೆ: “ಭೂಸಂತ್ರಸ್ತರಿಗೆ ಉದ್ಯೋಗವನ್ನು ಕೊಟ್ಟರು. ಕೊಟ್ಟ ಉದ್ಯೋಗವನ್ನು ಮುಂದುವರಿಸಬೇಕೆಂದಿಲ್ಲ ಎಂದು ಹೇಳುತ್ತಾರೋ?’ – ಶಕುಂತಳಾ ಶೆಟ್ಟಿ, ಭೂಸಂತ್ರಸ್ತರು
ಮುಂದಿನ ಹೆಜ್ಜೆ ಚಿಂತನೆ :
1993ರಲ್ಲಿ ಕೊಂಕಣ ರೈಲ್ವೇ ನಿರ್ಮಾಣವಾಗುವಾಗ ಉಡುಪಿ ಕುಕ್ಕಿಕಟ್ಟೆಯಲ್ಲಿ ಭೂಸ್ವಾಧೀನವಾದ ಜಾಗಕ್ಕೆ ಸಿಕ್ಕಿದ ಮೊತ್ತ ಭಾರೀ ಕಡಿಮೆ (ಸೆಂಟ್ ಒಂದಕ್ಕೆ 1,700 ರೂ.). ಆಗ ನಾನು ಮತ್ತು ಮಣಿಪಾಲದ ಹರೀಶ್ ಹೆಗ್ಡೆಯವರು ಹೋರಾಟ ಮಾಡಿದೆವು. ನಮಗೆ ಉದ್ಯೋಗದ ಲಾಭವೂ ಆಗಲಿಲ್ಲ. ಈಗ ಮುಂದೇನು ಮಾಡಬೇಕೆಂಬ ಚಿಂತನೆಯಲ್ಲಿದ್ದೇವೆ. – ನಾರಾಯಣ ಶೇರಿಗಾರ್, ಕುಕ್ಕಿಕಟ್ಟೆ, ಉಡುಪಿ