ಕಾರವಾರ: ಕೊಂಕಣ ರೈಲ್ವೆ ಮಾರ್ಗ ಉತ್ತರ ಕನ್ನಡದಲ್ಲಿ ಅಲ್ಲಲ್ಲಿ ತನ್ನ ಸ್ವರೂಪ ಬದಲಿಸಿಕೊಂಡು ಮೇಲ್ದರ್ಜೆಗೆ ಏರುತ್ತಿದೆ. ಮಿರ್ಜಾನ್‌ನಲ್ಲಿ ಹೊಸ ಸ್ಟೇಶನ್, ಸ್ಟಾಫ್ ಕ್ವಾಟರ್ಸ್, ರೈಲ್ವೇ, ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ನಿಲ್ದಾಣದಕ್ಕೆ ಇದೇ ವರ್ಷದ ಆರಂಭದಲ್ಲಿ ಮಾಜಿ ರೈಲ್ವೆ ಸಚಿವ ಸುರೇಶ್ ಪ್ರಭು ಅಡಿಗಲ್ಲು ಹಾಕಿದ್ದರು.
7.18 ಕೋಟಿ ವೆಚ್ಚದ ಕಾಮಗಾರಿಗಳು ಈಗ ಪ್ರಾರಂಭವಾಗಿವೆ. ಸ್ಟೇಶನ್ ನಿರ್ಮಾಣದ ಪ್ರಾಥಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಪ್ರವಾಸಿತಾಣವೂ ಆಗಿರುವ ಮಿರ್ಜಾನ್‌ನಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣದ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ಮಿರ್ಜಾನ್ ರೈಲ್ವೆ ನಿಲ್ದಾಣದ ಕಾಮಗಾರಿಯನ್ನು 2018 ಡಿಸೆಂಬರ್ ಒಳಗೆ ಮುಗಿಸಿ ಅದನ್ನು ಜನತೆಗೆ ಸಮರ್ಪಿಸುವ ಗುರಿ ಹೊಂದಲಾಗಿದೆ.
ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಎರಡನೇ ರೈಲ್ವೆ ಪ್ಲಾಟಫಾರಂ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿ ಸಹ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ರೈಲ್ವೆ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಹಾಗಾಗಿ ಇಲ್ಲಿ ಪಾದಚಾರಿಗಳ ಸಂಚಾರಕ್ಕೆ ಓವರ್ ಬ್ರಿಜ್ ಹಾಗೂ ರೈಲ್ವೇ ಲೇನ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ವೇಗವಾಗಿ ನಡೆದಿದ್ದು 2018 ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ಭರವಸೆಯನ್ನು ಕೊಂಕಣ ರೈಲ್ವೆ ಹಿರಿಯ ಅಧಿಕಾರಿ ದಿಲೀಪ್ ಭಟ್ ಹೊಂದಿದ್ದಾರೆ. ಜೊತೆಗೆ ಉಡುಪಿ -ಪಡುಬಿದ್ರೆ ಸ್ಟೇಶನ್ ಮಧ್ಯೆ ಇನ್ನಂಜೆ ಎಂಬಲ್ಲಿ ರೈಲ್ವೆ ಸ್ಟೇಶನ್ ಮತ್ತು ಎರಡನೇ ರೈಲು ಮಾರ್ಗದ ನಿರ್ಮಾಣ ಭರದಿಂದ ನಡೆದಿದೆ.
6.78 ಕೋಟಿ ವೆಚ್ಚದ ಕಾಮಗಾರಿ ಇದಾಗಿದೆ. ಅಲ್ಲದೇ ಕೊಂಕಣ ರೈಲ್ವೆ ಮೊದಲ ಸ್ಟೇಶನ್ ತೋಕೂರಿನಲ್ಲಿ 18.16 ಕೋಟಿ ವೆಚ್ಚದಲ್ಲಿ ರೈಲು ಮಾರ್ಗ ನಿರ್ಮಾಣ ಕಾರ್ಯ ನಡೆದಿದೆ. ಎಂಆರ್‌ಪಿಎಲ್ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಪೆಟ್ ಕೋಕ್‌ನ್ನು ಕಂಪನಿ ಬಯಸಿದ ಕಡೆಗೆ ರಫ್ತು ಮಡಲಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಹ ಪೆಟ್ರೋಲಿಯಂ ಪ್ರೋಡಕ್ಟ್ ಸಾಗಾಟಕ್ಕೆ ರೈಲು ಮಾರ್ಗವನ್ನು ಗೂಡ್ಸ್ ರೈಲುಗಳ ಮೂಲಕ ಬಳಸಿಕೊಳ್ಳಲಿದೆ. ಎಂಆರ್‌ಪಿಎಲ್ ಬಂಡವಾಳ ಹೂಡಿ ತನ್ನ ಕಾರ್ಖಾನೆಯತನಕ ರೂಪಿಸಿಕೊಳ್ಳುತ್ತಿದೆ. ತನ್ನ ಬಳಿ ಇರುವ ಪೆಟ್ ಕೋಕ್‌ನ್ನು ಸ್ಟೀಲ್ ಮತ್ತು ಸಿಮೆಂಟ್ ಉದ್ಯಮಗಳಿಗೆ ರಫ್ತು ಮಾಡಲು ಎಂಆರ್ ಪಿಎಲ್ ಯೋಜನೆ ಹೊಂದಿದೆ. ಅಲ್ಲದೇ ಇಲ್ಲಿ ಕಂಟೇನರ್‌ಗಳನ್ನು ಹಾಕಲು ಥಾಮಸ್ ಆಳ್ವಾರೀಸ್ ಮತ್ತು ರಫ್ತಾರ್ ಕಂಪನಿಗಳು ಕೆಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡಿವೆ. ತೂಕೂರಿನಲ್ಲಿ ಕಾಮಗಾರಿ ಭರದಿಂದ ಸಾಗಿದ್ದು, 2018 ನವ್ಹೆಂಬರ್ ವೇಳೆಗೆ 1.75 ಕಿ.ಮೀ.ಉದ್ದದ ಜೋಡಿ ರೈಲು ಮಾರ್ಗ ನಿರ್ಮಾಣವಾಗಲಿದೆ. ಇದರಿಂದ ಕೊಂಕಣ ರೈಲ್ವೆ ಗೂಡ್ಸ ರೈಲು ಸಂಚಾರದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಇದರಿಂದ ಕೊಂಕಣ ರೈಲ್ವೆಗೆ ಆದಾಯ ಸಹ ಇಮ್ಮಡಿಸಲಿದೆ.
ಬರುವ ಎರಡು ವರ್ಷದಲ್ಲಿ ಮಾರ್ಗ ವಿದ್ಯುದ್ದೀಕರಣ:
ಕೊಂಕಣ ರೈಲ್ವೆ ಬರುವ ಎರಡು ವರ್ಷದಲ್ಲಿ ಡಿಜೆಲ್ ಆಧಾರಿತ ರೈಲ್ವೆ ಸಂಚಾರಕ್ಕೆ ವಿದಾಯ ಹೇಳಲಿದೆ. ಮಾರ್ಗದ ವಿದ್ಯುದ್ದೀಕರಣ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಯೋಜನಾ ನೀಲಿ ನಕ್ಷೆ ಸಿದ್ಧವಾಗಿದೆ. ಯೋಜನಾ ವೆಚ್ಚವೂ ನಿಗದಿಯಾಗಿದೆ. ಹಾಗಾಗಿ ಬರುವ ದಿನಗಳಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ದಕ್ಷಿಣ ಕನ್ನಡದ ತೂಕೂರಿನಿಂದ ಉತ್ತರ ಕನ್ನಡ, ಗೋವಾ, ಮಹಾರಾಷ್ಟ್ರ ಮಾರ್ಗದಲ್ಲಿ ವಿದ್ಯುತ್ ರೈಲುಗಳು ಸಂಚಾರ ಆರಂಭಿಸಲಿವೆ. ಕೊಂಕಣ ರೈಲ್ವೆ ಆಧುನಿಕತೆಯತ್ತ ಮುಖ ಮಾಡಿದ್ದು, ಡಬ್ಲಿಂಗ್ ಕಾಮಗಾರಿಗಳು ಸಹ ಆರಂಭವಾಗಿವೆ. ದ್ವಿಪಥಕ್ಕೆ ಬೇಕಾದಷ್ಟು ಭೂಮಿಯನ್ನು ಮೊದಲೇ ಕೊಂಕಣ ರೈಲ್ವೆ ಪಡೆದಿದೆ. ಶೇ.10 ರಷ್ಟು ಮಾತ್ರ ಹೆಚ್ಚುವರಿ ಭೂಮಿ ಬೇಕಾಗಿದ್ದು, ಅದನ್ನು ಸಹ ಪಡೆಯುವ ಪ್ರಕ್ರಿಯೆಗೆ ಸದ್ಯದಲ್ಲೇ ಚಾಲನೆ ನೀಡಲಿದೆ.
ಕೊಂಕಣ ರೈಲ್ವೆ ಆಧುನೀಕರಣದತ್ತ ಮುಖಮಾಡಿದೆ. ಮಿರ್ಜಾನ್ ಹೊಸ ನಿಲ್ದಾಣ ಪಡೆದರೆ ಮತ್ತು ಮುರುಡೇಶ್ವರ ನಿಲ್ದಾಣ ಮೇಲ್ದರ್ಜೆಗೆ ಏರಲಿದೆ. ಇದರಿಂದ ಪ್ರವಾಸಿಗರ ಸಂಚಾರ ಹೆಚ್ಚಲಿದೆ. ಎಂಆರ್ ಪಿಎಲ್ ಬಳಿ ರೈಲು ಮಾರ್ಗ ಕಾರ್ಯ ನಿರ್ಮಾಣದ ನಂತರ ಗೂಡ್ಸ ರೈಲು ಸಂಚಾರ ಸಹ ಹೆಚ್ಚಲಿದೆ.
ದಿಲೀಪ್ ಭಟ್, ಹಿರಿಯ ಅಧಿಕಾರಿಕೊಂಕಣ ರೈಲ್ವೆ