Advertisement
ಈಗ ಬಿಜೂರ್‌ನಿಂದ ವೆರ್ನ ವರೆಗೆ 200 ಕಿ.ಮೀ. ಕಾಮಗಾರಿ ನಡೆಯುತ್ತಿದ್ದು ಇದರಲ್ಲಿ ಬಿಜೂರಿನಿಂದ ಕುಮಟಾವರೆಗೆ ವಿದ್ಯುದೀಕರಣ ಮುಗಿದಿದೆ. ರೋಹಾದಿಂದ ವೆರ್ನಾ ವರೆಗೆ (430 ಕಿ.ಮೀ.) ಮತ್ತು ವೆರ್ನಾದಿಂದ ತೋಕೂರು ವರೆಗೆ (300 ಕಿ.ಮೀ.) ಇಬ್ಬರು ಗುತ್ತಿಗೆದಾರರಿಂದ ಕಾಮಗಾರಿ ನಡೆಯುತ್ತಿದೆ. 2020ರ ಡಿಸೆಂಬರ್ ಅಂತ್ಯದೊಳಗೆ ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಶೇ. 100 ಪೂರ್ಣಗೊಳ್ಳಲಿದೆ. ಕೆಲವು ಭಾಗ ವಿದ್ಯುದೀಕರಣ ಗೊಂಡರೂ ಉಳಿದ ಭಾಗದ ಕೆಲಸ ಬಾಕಿ ಇದ್ದರೆ ರೈಲುಗಳನ್ನು ಓಡಿಸಲು ಆಗುವುದಿಲ್ಲ ಎಂದು ಕೊಂಕಣ ರೈಲ್ವೇ ಪ್ರಾದೇಶಿಕ ವ್ಯವಸ್ಥಾಪಕ ಕಾರವಾರದ ಬಿ.ಬಿ. ನಿಖಂ ಹೇಳುತ್ತಾರೆ. ವಿದ್ಯುದೀಕರಣದ ಪ್ರಮುಖ ಪ್ರಯೋಜನ ರೈಲು ಸಂಚರಿಸುವ ವೇಗದ ಪ್ರಮಾಣದ್ದಲ್ಲ. ಈಗಲೂ ಕೊಂಕಣ ರೈಲು ಹಳಿಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸುವ ಸಾಮರ್ಥ್ಯ ಹೊಂದಿವೆ. 1,100 ಕೋ.ರೂ. ವೆಚ್ಚದ ವಿದ್ಯುದೀಕರಣ ಯೋಜನೆಯಿಂದ ಡೀಸೆಲ್ ಉಳಿತಾಯವಾಗಲಿದೆ. ಪ್ರಸ್ತುತ ವರ್ಷಕ್ಕೆ ಸುಮಾರು 200 ಕೋ.ರೂ. ಡೀಸೆಲ್‌ಗೆ ವೆಚ್ಚವಾಗುತ್ತಿದೆ. ವಿದ್ಯುದೀಕರಣದಿಂದ ವರ್ಷಕ್ಕೆ 80 ಕೋ.ರೂ. ಉಳಿತಾಯವಾಗಲಿದೆ ಎಂಬ ಲೆಕ್ಕಾಚಾರ ಇಲಾಖೆ ಹೊಂದಿದೆ. ಜತೆಗೆ ಮಾಲಿನ್ಯ ನಿಯಂತ್ರ ಣದ ಕೊಡುಗೆ, ರೈಲುಗಳ ದಕ್ಷತೆ ಹೆಚ್ಚಲಿದೆ. ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಅಗತ್ಯವಿರುವಲ್ಲಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರೋಹಾದಿಂದ ವೀರ್ ತನಕ 46 ಕಿ.ಮೀ. ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಬಳಿಕ ಸುಮಾರು 140 ಕಿ.ಮೀ. ಮಾರ್ಗದಲ್ಲಿ ಅಲ್ಲಲ್ಲಿ ಹಳಿ ದ್ವಿಗುಣಗೊಳಿಸಲಾಗುವುದು. ಈ ಪ್ರಸ್ತಾವನೆ ಕೇಂದ್ರ ಸಚಿವ ಸಂಪುಟದೆದುರು ಇದೆ.
ಇನ್ನಂಜೆ ರೈಲು ನಿಲ್ದಾಣದ ಕೆಲಸ ಶೇ. 99 ಪೂರ್ಣಗೊಂಡಿದೆ. ಹಳಿಯ ಕೆಲಸ ಮಾತ್ರ ಸ್ವಲ್ಪ ಬಾಕಿ ಇದೆ. ಇದು ಮಳೆಗಾಲದ ಬಳಿಕ ಪೂರ್ತಿಯಾಗಲಿದೆ. ಅಕ್ಟೋಬರ್ ಕೊನೆಯೊಳಗೆ ಶೇ.100 ಕಾಮಗಾರಿ ಆಗಲಿದೆ. ನವೆಂಬರ್‌ನಲ್ಲಿ ಇದರ ಸೇವೆ ಸಾರ್ವಜನಿಕರಿಗೆ ಸಿಗಲಿದೆ.
– ಬಿ.ಬಿ. ನಿಖಂ, ಪ್ರಾದೇಶಿಕ ವ್ಯವಸ್ಥಾಪಕರು, ಕೊಂಕಣ ರೈಲ್ವೇ, ಕಾರವಾರ