Advertisement
ಮದ್ಯ, ಮೋಜು,ಮಸ್ತಿಗಳಿಗೆ ಹೆಸರಾದ ಗೋವಾ, ರಾಜಕೀಯದ ದೊಂಬರಾಟಕ್ಕೂ ಹೆಸರುವಾಸಿ. ಕಡಲಬ್ಬರದ ಸದ್ದಿನ ರೀತಿಯಲ್ಲೇ ರಾಜ್ಯದ ರಾಜಕೀಯದ ಭಿನ್ನಮತ ಕೂಡ ಆಗಾಗ ಜೋರಾಗಿ ಸದ್ದು ಮಾಡುತ್ತಿರುತ್ತದೆ. ನೀರಿಂದ ನೆಲಕ್ಕೆ, ನೆಲದಿಂದ ನೀರಿಗೆ ಹಾರುವ ಕಪ್ಪೆಗಳ ತರಹ ರಾಜಕೀಯ ನಾಯಕರು, ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಬದಲಿಸುವುದು ಇಲ್ಲಿ ಮಾಮೂಲಿ. ಹೀಗಾಗಿ, ಗೋವಾದ ರಾಜಕೀಯ ಕೂಡ ಮದ್ಯದ ಅಮಲಿನ ರೀತಿಯಲ್ಲಿ ಆಗಾಗ ನಶೆ ಏರಿಸುತ್ತಿರುತ್ತದೆ. ಇಂತಹ ರಾಜಕೀಯ ಅಸ್ಥಿರತೆಗಳಿಗೆ ನೆಲೆಯಾದ ಗೋವಾ, ಮತ್ತೂಂದು ಚುನಾವಣೆಯ ಹೊಸ್ತಿಲಲ್ಲಿದೆ.
Related Articles
Advertisement
ಆದರೆ, ಈ ಬಾರಿ ಬಿಜೆಪಿಗೆ ಗೆಲುವು ಅಷ್ಟು ಸುಲಭವಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಮರುದಿನವೇ, ಅಂದರೆ, ಜ.5ರಂದು ಎಂಜಿಪಿ, ಬಿಜೆಪಿಯ ಸ್ನೇಹ ಕಡಿದುಕೊಂಡಿತು. ಇದೇ ವೇಳೆ, ನೆರೆಯ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟ ಸರ್ಕಾರದ ಪಾಲುದಾರ ಪಕ್ಷ ಶಿವಸೇನೆ, ಎಂಜಿಪಿ ಜತೆ ಕೈಜೋಡಿಸಿದೆ. ಅಲ್ಲದೆ, 40 ಸ್ಥಾನಗಳ ಪೈಕಿ 37 ಸ್ಥಾನಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ, ಸಾಲ್‌ಸೆಟ್ಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ 3 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದೆ. ಈ ಮೂರೂ ಕ್ಷೇತ್ರಗಳು ಕ್ಯಾಥೊಲಿಕ್ ಕ್ರೈಸ್ತರ ಪ್ರಭಾವವಿರುವ ಕ್ಷೇತ್ರಗಳು.
2012ರಲ್ಲಿ ಚುನಾವಣೆಗೂ ಮೊದಲೇ ಪಕ್ಷ, ಪರಿಕ್ಕರ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಬಿಂಬಿಸಿತ್ತು. ಈ ಬಾರಿ ಸಿಎಂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಚುನಾವಣೆಯನ್ನು ಪರಿಕ್ಕರ್ ನೇತೃತ್ವದಲ್ಲಿಯೇ ಎದುರಿಸಲಿದ್ದೇವೆ ಎಂಬುದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಘೋಷಿಸಿದ್ದಾರೆ. ಆದರೆ, ಪಕ್ಷ ಅಧಿಕಾರಕ್ಕೆ ಬಂದರೆ ಅಥವಾ ಅತಂತ್ರ ವಿಧಾನಸಭೆ ರಚನೆಯಾದರೆ, ಸಿಎಂ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ.
ಒಟ್ಟೂ ಮತದಾರರ ಪೈಕಿ ಶೇ.25ರಷ್ಟಿರುವ ಕ್ಯಾಥೊಲಿಕ್ ಸಮುದಾಯ ಚುನಾವಣೆಯಲ್ಲಿ ತನ್ನದೇ ಆದ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಈ ನಿಟ್ಟಿನಲ್ಲಿ ಚರ್ಚ್‌ನ ಪಾತ್ರ ಮುಖ್ಯ. ಇದೇ ಕಾರಣದಿಂದಾಗಿ ಕಳೆದ ಬಾರಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಅನುದಾನ ಮುಂದುವರಿಸುವ ವಿಷಯ ಬಂದಾಗ ಪರಿಕ್ಕರ್ ಹಾಗೂ ಸಿಎಂ ಪಾರ್ಸೆಕರ್ ಸಕಾರಾತ್ಮಕ ನಿಲುವು ತಾಳಿದರು. ಇದು ಆರ್‌ಎಸ್‌ಎಸ್‌ನ ಆಕ್ರೋಶಕ್ಕೂ ಕಾರಣವಾಯಿತು. ಆರ್‌ಎಸ್‌ಎಸ್‌ನ ಅಂಗಸಂಸ್ಥೆ “ಭಾರತೀಯ ಭಾಷಾ ಸುರûಾ ಮಂಚ್’ ಸರ್ಕಾರದ ನಿಲುವಿನ ವಿರುದ್ಧ ಪ್ರತಿಭಟನೆ ನಡೆಸಿತು.
ಇದೇ ವೇಳೆ, ಸಂಘದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಸುಭಾಷ್ ವೆಲಿಂಗ್‌ಕರ್, ಬಿಜೆಪಿಯಿಂದ ಹೊರ ಬಂದರು. ಈಗ ಗೋವಾ ಸುರûಾ ಮಂಚ್ ಎಂಬ ಹೊಸ ಪಕ್ಷ ಕಟ್ಟಿ, ಬಿಜೆಪಿ ವಿರುದ್ಧವೇ ತೊಡೆ ತಟ್ಟಿದ್ದಾರೆ. ಹೀಗಾಗಿ, ಆರ್‌ಎಸ್‌ಎಸ್‌ನ ಒಂದು ಬಣ, ಈಗ ಬಿಜೆಪಿ ಪರವಾಗಿ ಕೆಲಸ ಮಾಡುವುದು ಅನುಮಾನ. ಜೊತೆಗೆ, 2012ರಲ್ಲಿ ಪಕ್ಷಕ್ಕೆ ವರವಾಗಿದ್ದ ಕಾಂಗ್ರೆಸ್ ವಿರೋಧಿ ಅಲೆ ಈ ಬಾರಿ ಇಲ್ಲ.
ಅಷ್ಟೇ ಅಲ್ಲ, 2012ರ ಚುನಾವಣೆಯಲ್ಲಿ ಕ್ಯಾಥೊಲಿಕ್ ಚರ್ಚ್, ಭ್ರಷ್ಟರ ವಿರುದ್ಧ ಹೋರಾಟ ಎನ್ನುವ ಮೂಲಕ ಕಾಂಗ್ರೆಸ್‌ಗೆ ವಿರೋಧ ವ್ಯಕ್ತಪಡಿಸಿತ್ತು. ಇದು ಬಿಜೆಪಿಗೆ ವರದಾನವಾಗಿತ್ತು. ಆದರೆ, ಈ ಬಾರಿ ಅಲ್ಪಸಂಖ್ಯಾತರ ಮತಗಳು ಸಾರಾಸಗಟಾಗಿ ಬಿಜೆಪಿಗೆ ಬೀಳುತ್ತವೆ ಎಂದು ಹೇಳುವ ಹಾಗಿಲ್ಲ. ಆದರೆ, ಸದಾ ರಾಜಕೀಯ ಅಸ್ಥಿರತೆಗೆ ಹೆಸರಾದ ಗೋವಾದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಸ್ಥಿರ ಸರ್ಕಾರ ನೀಡಿದ ಸಾಧನೆ ಬಿಜೆಪಿ ಹಿಂದಿದೆ. ಅಲ್ಲದೆ, ಮಹದಾಯಿ ನದಿ ವಿವಾದದ ವಿಚಾರದಲ್ಲಿ ಎಲ್ಲಾ ಒತ್ತಡಗಳನ್ನು ಮೆಟ್ಟಿ ನಿಂತು ರಾಜ್ಯದ ಜನತೆಯ ಹಿತ ರಕ್ಷಿಸಿದ್ದು ಬಿಜೆಪಿ ಸರ್ಕಾರದ ಪ್ಲಸ್ ಪಾಯಿಂಟ್.
ಇನ್ನು, ವಾಸ್ಕೊ-ಡ-ಗಾಮಾ, ಮಡಗಾಂವ ಸೇರಿದಂತೆ ಹಲವು ಮತಕ್ಷೇತ್ರಗಳಲ್ಲಿ ಹೊರ ರಾಜ್ಯದಿಂದ ಬಂದು ನೆಲೆಸಿರುವವರ ಮತಗಳು ನಿರ್ಣಾಯಕ. ಈ ಪೈಕಿ, ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳವಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರೂ ಇದ್ದಾರೆ. ರಾಜ್ಯದ 11 ಲಕ್ಷ ಮತದಾರರ ಪೈಕಿ 2 ಲಕ್ಷಕ್ಕೂ ಹೆಚ್ಚು ಮತದಾರರು ಕನ್ನಡಿಗರು. ಬೈನಾ ಬೀಚ್ ಸೇರಿದಂತೆ ಅಕ್ರಮ ನಿವಾಸಿಗಳ ತೆರವಿಗೆ ಸರ್ಕಾರ ಕಳೆದ ಬಾರಿ ಕೈಗೊಂಡ ಕಾರ್ಯಾಚರಣೆ ಈ ಮತಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಯಿದೆ.
ಇದೇ ವೇಳೆ, ಕಡಲಾಚೆ, ಮಹಾನದಿ ತೀರ ಹಾಗೂ ಸುತ್ತಮುತ್ತ ಅಕ್ರಮವಾಗಿ ತಲೆ ಎತ್ತಿರುವ ಕ್ಯಾಸಿನೊ ಕೇಂದ್ರ ತೆರವು ವಿಚಾರ ಚುನಾವಣೆಯಲ್ಲಿ ಚರ್ಚೆಯ ವಿಷಯವಾಗಿದೆ. ಅಧಿಕಾರಕ್ಕೆ ಬಂದರೆ ಕ್ಯಾಸಿನೊ ಕೇಂದ್ರಗಳನ್ನು ಮುಚ್ಚುವುದಾಗಿ ಕಾಂಗ್ರೆಸ್ ಹಾಗೂ ಆಮ್‌ಆದ್ಮಿಗಳು ಭರವಸೆ ನೀಡಿದ್ದರೆ, ಕಳೆದ ಚುನಾವಣೆಯಲ್ಲಿ ಇದೇ ರೀತಿಯ ಭರವಸೆ ನೀಡಿದ್ದ ಬಿಜೆಪಿ, ಈ ಬಾರಿ ಅಸ್ಪಷ್ಟ ನಿಲುವು ತಾಳಿದೆ. ಇವುಗಳ ವಿರುದ್ಧ ದೃಢ ನಿಲುವು ತಾಳುವಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾರಣ, ಗಣಿ ಹಾಗೂ ಪ್ರವಾಸೋದ್ಯಮದ ನಂತರ ಸರ್ಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಉದ್ಯಮವಿದು. ಜೊತೆಗೆ, ಸಾಕಷ್ಟು ಪ್ರಭಾವಿಗಳು ಇದರ ಹಿಂದಿದ್ದಾರೆ.
ಇನ್ನು, ಇತರ ಪಕ್ಷಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ. ಪ್ರಾದೇಶಿಕ ಪಕ್ಷ ಗೋವಾ ಫಾರ್ವರ್ಡ್ ಜತೆಗಿನ ಸೀಟು ಹಂಚಿಕೆ ವಿಷಯವಾಗಿ ಕಾಂಗ್ರೆಸ್‌ನಲ್ಲಿ ಭಿನ್ನಮತ ತಲೆದೋರಿದೆ. ಪಕ್ಷದ ಉಸ್ತುವಾರಿ ದಿಗ್ವಿಜಯ ಸಿಂಗ್ ಆ ಪಕ್ಷದೊಂದಿಗೆ ಮೈತ್ರಿಗೆ ಒಲವು ತೋರಿದರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಲುಝಿನ್ಹೊ ಫಲೈರೊ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಸಿಡಿದು ಹೊರ ಹೋಗಿರುವ ಎಂಜಿಪಿ ಕಳೆದ 10 ವರ್ಷದಿಂದ ಅಧಿಕಾರದ ರುಚಿ ನೋಡಿದ್ದರೂ, ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್ ಜೊತೆಗಿತ್ತು. ಕಳೆದ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಇದು ಜನರಲ್ಲಿ ಅದರ ಬಗ್ಗೆ ನಕಾರಾತ್ಮಕ ಧೋರಣೆ ಮೂಡಲು ಕಾರಣವಾಗಿದೆ. ಅಲ್ಲದೆ, ಬಿಜೆಪಿಗೆ ಹೊಡೆತ ನೀಡುವಷ್ಟು ಪಕ್ಷ ಪ್ರಬಲವಾಗಿ ಇಂದು ಉಳಿದಿಲ್ಲ.
ಇನ್ನು, ಭ್ರಷ್ಟಾಚಾರರಹಿತ ಸರ್ಕಾರ ಹಾಗೂ ಮಾಲಿನ್ಯರಹಿತ ಗಣಿಗಾರಿಕೆಯ ಭರವಸೆ ನೀಡಿರುವ ಆಮ್‌ಆದ್ಮಿ, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಚುನಾವಣೆ ಎದುರಿಸುತ್ತಿದೆ. ಭ್ರಷ್ಟಾಚಾರ ವಿರೋಧಿ ಹೊರಾಟದ ಮೂಲಕ ಸಾಕಷ್ಟು ಸದ್ದು ಮಾಡಿರುವ ಪಕ್ಷ, ದಿಲ್ಲಿಯ ಸಾಧನೆಯನ್ನು ಪುನರಾವರ್ತಿಸುವ ಇರಾದೆ ಹೊಂದಿದೆ. ಬಿಜೆಪಿ ವಿರೋಧಿ, ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟು, ಚುನಾವಣೆ ಎದುರಿಸುತ್ತಿದೆ. ಆದರೆ, ಇವು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗಲಿವೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. – ಮಹಾಬಲೇಶ್ವರ ಹೊನ್ನೆಮಡಿಕೆ