ಮಾಸ್ಕೊ: ಸತತ ಮೂರು ಪಂದ್ಯಗಳಲ್ಲಿ ಸೋಲನ್ನು ಕಂಡಿರುವ ಭಾರತದ ಕೊನೆರು ಹಂಪಿ ಅವರು ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲೂ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ. ಎರಡು ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಅವರು 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮೊದಲ ದಿನದ ಸ್ಪರ್ಧೆ ಮುಗಿದಾಗ ಹಂಪಿ 7 ಅಂಕಗಳೊಂದಿಗೆ ಇತರ ಮೂವರು ಸ್ಪರ್ಧಿಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು. ಹೀಗಾಗಿ ಪ್ರಶಸ್ತಿ ಗೆಲ್ಲುವ ಸಾಧ್ಯತೆಯೊಂದನ್ನು ತೆರೆದಿರಿಸಿದ್ದರು. ಆದರೆ 32ರ ಹರೆಯದ ಹಂಪಿ ದ್ವಿತೀಯ ದಿನ ಶ್ರೇಷ್ಠ ಆಟವಾಡಲು ವಿಫಲರಾದರು. ಒಟ್ಟಾರೆ 17 ಪಂದ್ಯಗಳನ್ನಾಡಿದ ಅವರು 10.5 ಅಂಕ ಗಳಿಸಲಷ್ಟೇ ಶಕ್ತರಾದರು.
ಮಂಗಳವಾರ ಸ್ಪರ್ಧೆಯ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಹಂಪಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದರು. ಆಬಳಿಕ ಸತತ ಎರಡು ಡ್ರಾ ಸಾಧಿಸುವ ಮೂಲಕ ಅವರು ಆತಿಥೇಯ ನಾಡಿನ ಕ್ಯಾಥರಿನಾ ಲಾಗ್ನೊ ಅವರ ಜತೆ ಮುನ್ನಡೆ ಹಂಚಿಕೊಂಡರು. ಆದರೆ 13ನೇ ಸುತ್ತಿನ ಬಳಿಕ ಹಂಪಿ ಮತ್ತು ಲಾಗ್ನೊ ತಲಾ 10 ಅಂಕ ಗಳಿಸಿದ್ದರು. 14ನೇ ಸುತ್ತಿನ ಪಂದ್ಯದಲ್ಲಿ ಹಂಪಿ ಡ್ರಾ ಸಾಧಿಸಿದ್ದರಿಂದ ದ್ವಿತೀಯ ಸ್ಥಾನಕ್ಕೆ ಕುಸಿದರು.
ಕೊನೆಯ ಮೂರು ಸುತ್ತುಗಳ ಹೋರಾಟದಲ್ಲಿ ಹಂಪಿ ಸೋಲನ್ನು ಕಾಣುವ ಮೂಲಕ ಹಿನ್ನಡೆ ಅನುಭವಿಸಿದರು. ಅಂತಿಮವಾಗಿ 12ನೇ ಸ್ಥಾನಕ್ಕೆ ಕುಸಿದರು. ಭಾರತದ ಇನ್ನೋರ್ವ ಸ್ಪರ್ಧಿ ಹರಿಕಾ ದ್ರೋಣವಲ್ಲಿ 25ನೇ ಸ್ಥಾನ ಪಡೆದರು.
ಹಂಪಿ ಈ ಮೊದಲು ವಿಶ್ವ ರ್ಯಾಪಿಡ್ ಚೆಸ್ ಕೂಟದ ಪ್ರಶಸ್ತಿ ಜಯಿಸಿದ್ದರು. ಚೀನದ ಲೀ ತಿಂಗ್‌ಝೀ ಅವರೊಂದಿಗೆ ನಡೆದ ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಹಂಪಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು.
ಲಾಗ್ನೊಗೆ ಪ್ರಶಸ್ತಿ
ಮೊದಲ ದಿನದ ಸ್ಪರ್ಧೆಯ ಬಳಿಕ ಆಡಿದ 9 ಪಂದ್ಯಗಳಲ್ಲಿ ಎಂಟಂಕ ಪಡೆದಿದ್ದ ರಶ್ಯದ ಕ್ಯಾಥರಿನಾ ಲಾಗ್ನೊ ದ್ವಿತೀಯ ದಿನವೂ ಉತ್ತಮವಾಗಿ ಆಡಿ ಗಮನ ಸೆಳೆದರು. 17 ಪಂದ್ಯಗಳಲ್ಲಿ 13 ಅಂಕ ಗಳಿಸುವ ಮೂಲಕ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಂಡರು. ಉಕ್ರೈನಿನ ಅನ್ನಾ ಮುಝಿಚುಕ್ ದ್ವಿತೀಯ ಚೀನದ ತಾನ್ ಜೊಂಗಿ ತೃತೀಯ ಮತ್ತು ರಶ್ಯದ ವಲೆಂಟಿನಾ ಗುನಿನಾ ನಾಲ್ಕನೇ ಸ್ಥಾನ ಪಡೆದರು. ಪುರುಷರ ವಿಭಾಗದ ಪ್ರಶಸ್ತಿಯನ್ನು ನಾರ್ವೆಯ ಮ್ಯಾಗ್ನಸ್ ಲಾರ್ಸನ್ ತನ್ನಲ್ಲಿ ಉಳಿಸಿಕೊಂಡಿದ್ದಾರೆ.