Advertisement

ಬಳಕೆಗೆ ಬಾರದಂತಾದ ಕೊಂಡವಾಡೆ

05:04 PM Dec 21, 2019 | Team Udayavani |

ಶಿರಸಿ: ಒಂದೆಡೆ ಹಗಲು ರಾತ್ರಿ ಎನ್ನದೇ ಬಿಡಾಡಿ ದನಗಳ ಕಾಟ, ಇನ್ನೊಂದೆಡೆ ಬಿಡಾಡಿ ದನಗಳಿಗೆ ನೆಲೆ ಕೊಡಬೇಕಿದ್ದ ಕೊಂಡವಾಡೆಗೆ ಅನಾಥಭಾವದ ಸಂಕಟ. ನಗರದಲ್ಲಿ ಬಿಡಾಡಿ ದನಗಳ ಹಾವಳಿ ತಡೆಯಲು ಕಳೆದ ಮೂರು ವರ್ಷಗಳ ಹಿಂದೆ 8 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಿ ಕಟ್ಟಿದ ಕೊಂಡವಾಡೆ ಅಪೂರ್ಣವಾಗಿ, ಈಗ ಬಳಕೆಗೂ ತತಕ್ಷಣಕ್ಕೆ ಬಾರದಂತಹ ಸ್ಥಿತಿಗೆ ತಲುಪಿದೆ.

Advertisement

ಬೇಕಾಬಿಟ್ಟಿ ಜಾನುವಾರುಗಳು ಇರಬೇಕಿದ್ದ ಕಡೆ ಬೇಕಾಬಿಟ್ಟಿ ಗಿಡಗಳು ಬೆಳೆದಿವೆ. ಪಟ್ಟಣದ ರಾಘವೇಂದ್ರ ಮಠದ ಸಮೀಪದಲ್ಲಿರುವ ನಗರಸಭೆ ಅಂದಿನ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾಲದಲ್ಲೇ ನಿರ್ಮಾಣವಾಗಿದ್ದ ಕೊಂಡವಾಡೆ ಅರ್ಥಾತ್‌ ದನದ ದೊಡ್ಡಿ ಇಂದು  ಅನಾಥವಾಗಿದೆ. ನಿರ್ವಹಣಾ ಅನುದಾನದ ಕೊರತೆಯಿಂದ ಬಳಲುತ್ತಲೇ ಹಾಕಿದ ಹಣವೂ ದಂಡವಾಗಿ, ನಿರ್ವಹಣೆಗೂ ಬಾರದಂತಾಗಿದೆ. ಇತ್ತ ಬಿಡಾಡಿ ದನಗಳು ನಗರದಲ್ಲಿ ನೂರಕ್ಕೂ ಹೆಚ್ಚಿದ್ದು, ಅವುಗಳ ಹಾವಳಿ ಕೂಡ ಮಿತಿ ಮೀರಿದೆ. ರಾತ್ರಿ ಹಗಲು ಸಂಚಾರ ಕೂಡ ಆತಂಕ ಮೂಡಿಸಿದೆ. ಜಾನುವಾರುಗಳ ನಡುವಿನ ಕಾದಾಟ ಕೂಡ ಪಾದಚಾರಿಗಳಿಗೂ ಅಪಾಯದಂತಿವೆ.

2015-16ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೊಂಡವಾಡೆಯಲ್ಲಿ ತಂದು ಕಟ್ಟುವ ಬಿಡಾಡಿ ದನಗಳ ನಿರ್ವಹಣೆ, ಆಹಾರ ವೆಚ್ಚ ಹಾಗೂ ದಂಡ ದರ ನಿಗದಿಪಡಿಸಿ ಠರಾಯಿಸಲಾಗಿತ್ತು. ಆದರೆ ನಿರ್ವಹಣೆಗೆ ದಂಡದ ಹಣ ನೆಚ್ಚಿಕೊಂಡು ಮುನ್ನಡೆಸುವುದು, ಬಿಡಾಡಿ ದನ ಹಿಡಿದು ತರುವುದು, ಪ್ರತ್ಯೇಕ ಸಿಬ್ಬಂದಿ, ನಿರ್ವಹಣಾ ವೆಚ್ಚಕ್ಕೆ ವ್ಯವಸ್ಥೆ ಆಗದೇ ಇದ್ದದ್ದೂ ಬಳಕೆಗೆ ಬಾರದಂತಾಗಿದೆ.

ಸರಿಸುಮಾರು 50 ಜಾನುವಾರುಗಳು ಇರಬಹುದಾದ ಕೊಂಡವಾಡೆಗೆ ಸುತ್ತಲೂ ಗೋಡೆ, ಕಂಬಗಳನ್ನು ನಿರ್ಮಿಸಲಾಗಿದೆ. ಆದರೆ ಮುಖ್ಯವಾಗಿ ಮೇಲ್ಛಾವಣಿ ಹಾಕಿಲ್ಲದಿರುವುದೂ ದನ ಬಿಡಲು ಆಗುವುದಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ. ತಕ್ಷಣ ನಗರಸಭೆ ಕೊಂಡವಾಡೆಯನ್ನು ದುರಸ್ತಿಗೊಳಿಸಿ, ಬಳಕೆಗೆ ಯೋಗ್ಯವಾಗಿಸಿ, ಜಾನುವಾರುಗಳ ನಿರ್ವಹಣೆಗೆ ಕೂಡ ಅನುದಾನ ಹೊಂದಿಸಿಕೊಂಡು ನಗರದ ಜನರಿಗೆ ಬಿಡಾಡಿ ದನಗಳ ಕಾಟ ತಪ್ಪಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next