ಕಂಪ್ಲಿ: ರಾಜ್ಯದ ರೈತರಿಗೆ ಬೀಜ, ರಸಗೊಬ್ಬರ ಹಾಗೂ ಔಷಧಗಳ ಕೊರತೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು. ಅವರು ತಾಲೂಕಿನ ಮೆಟ್ರಿ ಗ್ರಾಮದಲ್ಲಿ ರೈತರ ಪರಿಸ್ಥಿತಿ ಬಗ್ಗೆ ಚರ್ಚಿಸಿ ಮಾತನಾಡಿದರು. ರೈತರ ಪರಿಸ್ಥಿತಿ ಅಧ್ಯಯನ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸಿಗಬೇಕು.
ದೈನಂದಿನ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಹೋಗಬೇಕು. ಇದಕ್ಕೆ ಯಾವುದೇ ನಿರ್ಬಂಧಗಳಿರಬಾರದು. ಎಲ್ಲಾ ರೈತರು ಒಬ್ಬರಿಗೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ವೈರಸ್ ಅತ್ಯಂತ ಕೆಟ್ಟದ್ದಾಗಿದ್ದು, ಇದನ್ನು ನಿಯಂತ್ರಿಸಲು ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವೆಂದ ಅವರು, ಈಗಾಗಲೇ ಎರಡು ತಿಂಗಳ ಪಡಿತರ ವಿತರಣೆ ಮಾಡುತ್ತಿದ್ದು, ಸಾರ್ವಜನಿಕರಿಗೆ ತಲುಪಿದೆಯೇ ಇಲ್ಲವೋ ಎಂದು ಉತ್ತರ ಪಡೆದರು.
ಬ್ಯಾಡಗಿ ಮಾರುಕಟ್ಟೆ ಆರಂಭವಿಲ್ಲ: ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದು, ಬ್ಯಾಡಗಿ ಮಾರುಕಟ್ಟೆ ದೊಡ್ಡ ಮಾರುಕಟ್ಟೆಯಾಗಿದ್ದು, ಪ್ರತಿದಿನ 30-40ಸಾವಿರ ಜನ ಸೇರುವುದರಿಂದ ಸಧ್ಯದಲ್ಲಿ ಅದನ್ನು ಆರಂಭಿಸುವುದಿಲ್ಲ, ಕೆಲವು ದಿನ ರೈತರು ತಾಳಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸೋಣ ಎಂದರು.
ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ: ಪಟ್ಟಣದಲ್ಲಿ ಅಕಾಲಿಕ ಗಾಳಿ ಮಳೆಯಿಂದ ಸಾವಿರಾರು ಎಕರೆ ಭತ್ತ ಹಾಗೂ ಬಾಳೆ ನೆಲಕ್ಕಚ್ಚಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದು, ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದಾಗ ಉತ್ತರಿಸಿದ ಸಚಿವರು, ಕಂದಾಯ ಅಕಾರಿಗಳಿಗೆ ಸಮೀಕ್ಷೆಗೆ ಸೂಚಿಸಲಾಗಿದ್ದು, ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ರೈತರು ಸೂಕ್ತ ದಾಖಲೆಗಳನ್ನು ಹೊಂದಿರುವಂತೆ ಸೂಚಿಸಿದ ಅವರು, ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಬಿಜೆಪಿ ಮುಖಂಡ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಜಿ.ಸುಧಾಕರ್, ಕೊಡಿದಲ್ ರಾಜು, ಪುರಸಭೆ ಸದಸ್ಯರಾದ ಹೂಗಾರ ರಮೇಶ್ ಸೇರಿದಂತೆ ಕೆಲವೇ ಮುಖಂಡರು ಉಪಸ್ಥಿತರಿದ್ದರು.