ಕಂಪ್ಲಿ: ರಾಜಾರೋಷವಾಗಿ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಅಗೆತದಿಂದ ಯುವಕನೊಬ್ಬ ನೀರಿನ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ ಹಿನ್ನೆಲೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಜತೆಗೆ ಅಕ್ರಮ ಮರಳು ಅಗೆಯುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಯುವಕರು ಪಟ್ಟಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಂ. ರೇಣುಕಾಗೆ ಮನವಿ ಸಲ್ಲಿಸಿದರು.
ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯದಲ್ಲಿ ಅಕ್ರಮ ಮರಳು ದಂಧೆಯು ರಾಜಾರೋಷವಾಗಿ ನಡೆಯುತ್ತಿದ್ದು, ನದಿ ಎಲ್ಲೆಂದರಲ್ಲಿ ಗುಂಡಿಗಳನ್ನು ಅಗೆದು ಬಂಡಿಗಳಲ್ಲಿ ಅಧಿಕಾರಿಗಳ ಭಯ ಇಲ್ಲದೇ ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ. ಹಗಲು ರಾತ್ರಿಯನ್ನದೇ ದಂಧೆಕೋರರಿಂದ ಅಕ್ರಮ ಮರಳು ಧಂದೆ ನಡೆಯುತ್ತಿದೆ.
ಇಲ್ಲಿನ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ, ಅಧಿಕಾರಿಗಳು ಮೌನವಹಿಸಿರುವುದು ವಿಪರ್ಯಾಸವಾಗಿದೆ. ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಸೇತುವೆ ಮಾರ್ಗದಲ್ಲಿ ಅಧಿಕಾರಿಗಳು ಓಡಾಡುತ್ತಾರೆ. ಆದರೆ, ಅಕ್ರಮ ಮರಳು ಧಂದೆ ನಡೆಸುತ್ತಿದ್ದರೂ, ಅಧಿಕಾರಿಗಳ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಬೇಕಾಬಿಟ್ಟಿ ಎಂಬಂತೆ ಅಕ್ರಮ ಮರಳು ಧಂದೆಯನ್ನು ನಿಲ್ಲಿಸಿ, ನಂತರ ಮತ್ತೇ ಅಕ್ರಮ ಧಂದೆ ನಡೆಯುವುದು ಸಾಮಾನ್ಯವಾಗಿದೆ.
ಅಧಿಕಾರಿಗಳ ನಿರ್ಲಕ್ಷéವೇ ಮುಖ್ಯ ಕಾರಣವಾಗಿದೆ. ಇಲ್ಲಿನ ನದಿಯಲ್ಲಿ ಮರಳು ಅಗೆತದಿಂದ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಕಳೆದ ದಿನ(ಮಂಗಳವಾರ)ದಂದು ಹೋಳಿ ಹಬ್ಬದ ನಿಮಿತ್ತ ಯುವಕರು ಬಣ್ಣ ಎರಚಿಕೊಂಡ ನಂತರ ನದಿ ಸ್ನಾನಕ್ಕೆ ತೆರಳಿದ್ದಾರೆ. ಆದರೆ ನದಿಯಲ್ಲಿ ಮರಳು ಅಗೆತದಿಂದ ಬಿದ್ದಿರುವ ಗುಂಡಿಗಳ ಮಧ್ಯದಲ್ಲಿ ನಂ. 10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಯಲ್ಲಮ್ಮಕ್ಯಾಂಪಿನ ಯುವಕ ಕೆ. ಕಿರಣ್ ಮೃತಪಟ್ಟಿದ್ದಾನೆ. ಹೋಳಿ ಬ್ಬದ ಸಂದರ್ಭದಲ್ಲಿ ಯುವಕರು ನದಿ ನೀರಿನ ಗುಂಡಿಯಲ್ಲಿ ಸಾವನ್ನಪ್ಪುತ್ತಿದ್ದರೂ ಅಧಿಕಾರಿಗಳ ಮಾತ್ರ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈಗಲಾದರೂ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾಧಿ ಕಾರಿಗಳು ಎಚ್ಚರವಹಿಸಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಜತೆಗೆ ಅಕ್ರಮ ಮರಳು ಅಗೆಯುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.
ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ನದಿ ನೀರಿನ ಗುಂಡಿಯಲ್ಲಿ ಇನ್ನಷ್ಟು ಜನರ ಸಾವಿಗೆ ಕಾರಣವಾಗಬಹುದು. ಈ ಅನಾಹುತ ನಡೆಯುವ ಮೊದಲು ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಿ, ಅಕ್ರಮ ಮರಳು ದಂಧೆಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ಮತ್ತು ಮರಳು ದಂಧೆಕೋರರ ವಿರುದ್ಧ ಸೂಕ್ತಕ್ರಮವಹಿಸುವ ಮೂಲಕ ಮೃತ ಯುವಕನ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕೆಂದು ಯುವಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೌನೇಶ್, ಪ್ರಹ್ಲಾದ್, ಉಮೇಶ್, ರಾಕೇಶ್, ಓಬಳೇಶ್, ಜನಾರ್ಧನ, ಲಕ್ಷ್ಮಣ, ಕಾರ್ತಿಕ, ವಿಜಯ ಸೇರಿದಂತೆ ಯುವಕರು ಪಾಲ್ಗೊಂಡಿದ್ದರು.