Advertisement

ಆಹಾರ ಅರಸಿ ಕೃಷಿ ತೋಟಗಳಿಗೆ ಲಗ್ಗೆ ಇಡುವ ಕಾಡಾನೆಗಳು

09:47 AM Jun 03, 2022 | Team Udayavani |

ಕಡಬ: ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳ ಕೃಷಿ ತೋಟಗಳಿಗೆ ಪಕ್ಕದ ಕಾಡಿನಿಂದ ಆಹಾರ ಅರಸಿಕೊಂಡು ಬರುವ ಕಾಡಾನೆಗಳಿಗೆ ದಿನನಿತ್ಯ ಅಪಾರ ಪ್ರಮಾಣದ ಕೃಷಿ ಆಹುತಿಯಾಗುತ್ತಿರುವುದರಿಂದ ಪರಿಸರದ ಕೃಷಿಕರು ಹೈರಾಣಾಗಿದ್ದಾರೆ.

Advertisement

ಈ ಅವಳಿ ಗ್ರಾಮಗಳಲ್ಲಿ ಜನವಸತಿ ಪ್ರದೇಶಕ್ಕಿಂತ ಹೆಚ್ಚು ಅರಣ್ಯವೇ ಆವರಿಸಿಕೊಂಡಿದೆ. ಎರಡೂ ಗ್ರಾಮಗಳ ಒಟ್ಟು ವಿಸ್ತೀರ್ಣ 17,118.33 ಎಕ್ರೆ ಪ್ರದೇಶವಾದರೆ ಅದರಲ್ಲಿ 14,437.74 ಎಕ್ರೆ ಪ್ರದೇಶ ಅರಣ್ಯ. ಇಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಜನರನ್ನು ಆನೆಗಳ ಉಪಟಳ ನಿರಂತರವಾಗಿ ಕಾಡುತ್ತಿದೆ.

ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ ಕನಿಷ್ಠ ಎಂದರೂ 3-4 ಸಾವಿರ ಅಡಿಕೆ ಮರಗಳು, ಸಾವಿರಕ್ಕೂ ಮಿಕ್ಕಿ ರಬ್ಬರ್‌ ಗಿಡಗಳು, ನೂರಾರು ತೆಂಗಿನ ಮರಗಳು, ಸಾವಿರಾರು ಬಾಳೆ ಗಿಡಗಳು, ಕೃಷಿಗೆ ನೀರುಣಿಸುವ ನೀರಾವರಿ ಪೈಪ್‌ಗ್ಳು ಆನೆಗಳಿಂದಾಗಿ ನಾಶವಾಗುತ್ತಿವೆ. ಈ ಹಾನಿಗಳಿಗೆ ಸರಕಾರದಿಂದ ಲಭಿಸುವ ಪರಿಹಾರ ಧನ ಮಾತ್ರ ಅತ್ಯಲ್ಪ.

5 ವರ್ಷದ ಹಿಂದೆ ಇಲ್ಲಿನ ಕೃಷಿಕ ಗಣೇಶ್‌ ಪಿಲಿಕಜೆ ಅವರಿಗೆ ಸೇರಿದ 3 ಎಕ್ರೆ ಅಡಿಕೆ ತೋಟ ರಾತ್ರಿ ಬೆಳಗಾಗುವುದರೊಳಗೆ ಅನೆ ದಾಳಿಗೆ ತುತ್ತಾಗಿ ನಾಶವಾಗಿತ್ತು. ಗುಂಡ್ಯ ಸಮೀಪದ ದೇರಣೆ ಮಾಪಿಜಾಲು ನಿವಾಸಿ ರುಕ್ಮಯ್ಯ ಗೌಡ ಎಂಬವರಿಗೆ ಸೇರಿದ ತೋಟಕ್ಕೆ ಕಳೆದ ಕೆಲವು ದಿನಗಳಿಂದ ಮತ್ತೆ ದಾಳಿ ನಡೆಸಿ ನೂರಕ್ಕೂ ಮಿಕ್ಕಿ ಫಸಲು ಬರುವ ಅಡಕೆ ಗಿಡಗಳನ್ನು ನಾಶ ಮಾಡಿವೆ. ಸಿರಿಬಾಗಿಲು ಗ್ರಾಮದ ಬಾರ್ಯ ಪಿ.ಎಸ್.ಹೊನ್ನಪ್ಪ ಗೌಡರಿಗೆ ಸೇರಿದ ತೋಟಕ್ಕೆ ಆನೆಗಳು ಲಗ್ಗೆ ಇಟ್ಟು ಸುಮಾರು 185 ಅಡಿಕೆ ಮರಗಳನ್ನು ಪುಡಿಗೈದಿವೆ.

ಶಿರಿಬಾಗಿಲು ಗ್ರಾಮದ ಪೆರ್ಜೆ, ಪಿಲಿಕಜೆ, ಅನಿಲ, ದೇರಣೆ, ಗುಂಡ್ಯ, ಬಾರ್ಯ, ರೆಂಜಾಳ, ಕೊಂಬಾರು ಗ್ರಾಮದ ಕಾಪಾರು, ಅಗರಿ, ಬಗ್ಪುಣಿ, ಕೋಲ್ಪೆ, ಮಿತ್ತಬೈಲು, ಕಮರ್ಕಜೆ, ಮರುವಂಜಿ, ಬೊಟ್ಟಡ್ಕ ಪ್ರದೇಶಗಳಲ್ಲಿ ಆನೆಗಳು ನಿರಂತರ ದಾಳಿ ನಡೆಸುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತ್ಯಧಿಕ ಕೃಷಿ ನಾಶವಾಗಿದೆ. ರೈತರು ಗರ್ನಾಲ್‌, ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಪ್ರಯೋಜನಕ್ಕೆ ಬರುವುದಿಲ್ಲ. ಕೆಲವೊಮ್ಮೆ ಹಗಲಿನಲ್ಲೂ ಆನೆಗಳು ಇಲ್ಲಿ ಕಾಣ ಸಿಗುತ್ತವೆ. ಅದರಿಂದಾಗಿ ಜನ ರಸ್ತೆಗಳಲ್ಲಿ ಓಡಾಡಲೂ ಭಯಪಡುತ್ತಾರೆ.

Advertisement

ಆನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯಲು ಸರಕಾರ ಆಧುನಿಕ ರೀತಿಯ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಕೃಷಿ ಹಾನಿಗೆ ಸಮರ್ಪಕ ಪರಿಹಾರ ಸಿಗುವಂತೆ ಮಾಡಬೇಕೆಂಬುದು ಸ್ಥಳೀಯ ಜನರ ಆಗ್ರಹವಾಗಿದೆ.

ನಮ್ಮ ತೋಟಕ್ಕೆ ಈ ಬಾರಿಯೂ ಆನೆಗಳು ಲಗ್ಗೆ ಇಟ್ಟು ಅಡಿಕೆ, ಬಾಳೆ ಕೃಷಿ ನಾಶವಾಗಿದೆ. ಕಳೆದ ಬಾರಿ 1.5 ಲಕ್ಷ ರೂ.ಗಳಿಗೂ ಮಿಕ್ಕಿ ನಷ್ಟವಾಗಿತ್ತು. ಆದರೆ ಕೃಷಿ ನಾಶವಾಗಿರುವುದಕ್ಕೆ ಕೇವಲ 32 ಸಾವಿರ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಕೃಷಿ ಹಾನಿಗೆ ನಿಜವಾದ ನಷ್ಟವನ್ನು ಪರಿಹಾರವಾಗಿ ನೀಡಿದರೆ ಮಾತ್ರ ಕೃಷಿಕರಿಗೆ ಪ್ರಯೋಜನವಾಗಬಹುದು. ಗಣೇಶ್‌ ಪಿಲಿಕಜೆ, ಗ್ರಾ.ಪಂ. ಸದಸ್ಯ

ಆನೆಗಳು ಸಂಚರಿಸುವ ಪ್ರದೇಶಗಳಲ್ಲಿ ಸಾರ್ವಜನಿಕರು ಓಡಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆನೆ ದಾಳಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸರಕಾರದ ನಿಯಮಾನುಸಾರ ಪರಿಹಾರ ನೀಡಲಾಗುತ್ತಿದೆ. –ರಾಘವೇಂದ್ರ, ವಲಯ ಅರಣ್ಯಾಧಿಕಾರಿ, ಸುಬ್ರಹ್ಮಣ್ಯ ವಲಯ

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next