ಹೊಸ ಬಗೆಯ ಕಥೆ, ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಬೇಕೆಂಬ ಉದ್ದೇಶದೊಂದಿಗೆ ಕಥೆ ಆಯ್ಕೆ ಮಾಡಿಕೊಳ್ಳುವ ನಾಯಕ ನಟರ ಸಾಲಿನಲ್ಲಿ ಕೋಮಲ್ ಕೂಡಾ ಸಿಗುತ್ತಾರೆ. ಅದೇ ಕಾರಣದಿಂದ ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿಯೂ ಬಿಝಿಯಾಗಿದ್ದಾರೆ. ಸದ್ಯ ಕೋಮಲ್ ನಿರೀಕ್ಷೆಯಿಂದ ಎದುರು ನೋಡುತ್ತಿರುವ ಸಿನಿಮಾ “ಯಲಾಕುನ್ನಿ’ ಇಂದು ತೆರೆಕಾಣುತ್ತಿದೆ. ನಟನೆ ಜೊತೆಗೆ ನಿರ್ಮಾಣದಲ್ಲೂ ಕೋಮಲ್ ಸಾಥ್ ನೀಡಿದ್ದಾರೆ.
ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್‌ನಡಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ರವರು ನಿರ್ಮಿಸಿರುವ ಈ ಚಿತ್ರವನ್ನು ಪ್ರದೀಪ್ ನಿರ್ದೇಶಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಟ ಕೋಮಲ್, ನಿರ್ದೇಶಕ ಎನ್ ಆರ್.ಪ್ರದೀಪ್ ನನಗೆ ಈ ಚಿತ್ರದ ಕಥೆ ಹೇಳಿದಾಗ ಈ ಪಾತ್ರ ಮಾಡಲು ಕಷ್ಟ ಅಂತ ಹೇಳಿದ್ದೆ. ಆದರೆ ಅವರು ಬಿಡದೇ ನೀವು ಮಾಡುತ್ತೀರಾ ಅಂತ ಒಪ್ಪಿಸಿ ಈ ಪಾತ್ರ ಮಾಡಿಸಿದ್ದಾರೆ. ನಾನು ಮೊದಲ ಬಾರಿ ವಜ್ರಮುನಿ ಅವರ ಗೆಟಪ್ ಹಾಕಿಕೊಂಡು ಕನ್ನಡಿ ಮುಂದೆ ಬಂದು ನಿಂತಾಗ ನನಗೆ ನಾನು ಕಾಣಲಿಲ್ಲ. ವಜ್ರಮುನಿ ಅವರೇ ಕಂಡರು. ಅವರ ಆಶೀರ್ವಾದದಿಂದ ಈ ಪಾತ್ರ ಮಾಡಲು ಸಾಧ್ಯವಾಯಿತು. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಸರ್ಗ ಅಪ್ಪಣ್ಣ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಅಣ್ಣನ ಮಗ ಯತಿರಾಜ, ಜಯಸಿಂಹ ಮುಸುರಿ, ಮಯೂರ್ ಪಟೇಲ್, ಸಾಧುಕೋಕಿಲ, ದತ್ತಣ್ಣ, ಮಿತ್ರ, ತಬಲ ನಾಣಿ, ಶಿವರಾಜ್ ಕೆ.ಆರ್. ಪೇಟೆ, ಮಾನಸಿ ಸುಧೀರ್, ಸುಮನ್ ನಗರಕರ್ ಮುಂತಾದವರು ನಮ್ಮ ಚಿತ್ರದ ತಾರಾಬಳಗದಲ್ಲಿದ್ದಾರೆ’ ಎಂದರು.
ಚಿತ್ರಕ್ಕೆ ಧರ್ಮವಿಶ್ ಅವರ ಸಂಗೀತ, ಹಾಲೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನವಿದೆ.
ರವಿಪ್ರಕಾಶ್ ರೈ