Advertisement

ಕೊಲ್ಯ: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಟಯರ್‌ ಕಳವು

06:00 AM Mar 18, 2018 | |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯ ಬಳಿ ಇತ್ತೀಚೆಗೆ ವಾಹನ ಕಳ್ಳರ ಹಾವಳಿ ಹೆಚ್ಚುತ್ತಿದ್ದು, ಕೊಲ್ಯ ಶಾರದಾಕಟ್ಟೆ ಬಳಿ ಇರಿಸಲಾಗಿದ್ದ ಸ್ಕಾರ್ಪಿಯೋದ ನಾಲ್ಕು ಟಯರ್‌ಗಳನ್ನು  ಶುಕ್ರವಾರ ಡಿಸ್ಕ್ ಸಮೇತ ಕಳವು ನಡೆಸಲಾಗಿದೆ.

Advertisement

ಕೊಲ್ಯ ನಿವಾಸಿ ಉದ್ಯಮಿ ಲಿಂಗಪ್ಪ ಪೂಜಾರಿ ಅವರು ಹೆದ್ದಾರಿ ಸಮೀಪ ದಲ್ಲಿರುವ  ಮನೆಯ ಎದುರು ವಾಹನವನ್ನು ನಿಲ್ಲಿಸಿದ್ದರು. ರಾತ್ರಿ ಸುಮಾರು 2 ಗಂಟೆಯವರೆಗೆ ಮಕ್ಕಳು ಪರೀಕ್ಷೆಗೆ ಓದುತ್ತಿದ್ದು, ಮನೆಯವರು ಎಚ್ಚರವಾಗಿದ್ದರು. ಬಳಿಕ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ. ಕಳ್ಳರು ಟಯರ್‌ ಮತ್ತು ಡಿಸ್ಕ್ ಕಳಚಿ ನಾಲ್ಕು ಕೆಂಪು ಕಲ್ಲಿನ ಮೇಲೆ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ  ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹೆದ್ದಾರಿಯಲ್ಲಿ ಹೆಚ್ಚಿದ ಕಳವು
ತೊಕ್ಕೊಟ್ಟಿನಿಂದ ತಲಪಾಡಿವರೆಗೆ ಹೆದ್ದಾರಿಯಲ್ಲಿ ವಾಹನಗಳ ಕಳ್ಳತನ, ಚೂರಿ ತೋರಿಸಿ ದರೋಡೆ ನಡೆಸುವ ಪ್ರಕರಣಗಳು  ನಡೆಯುತ್ತಿವೆ. ಆರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಲಿಂಗಪ್ಪ ಪೂಜಾರಿ ಮತ್ತು ಅವರ ಸ್ನೇಹಿತರಿಗೆ ಸೇರಿದ  5 ಲಾರಿಗಳಿಂದ ಬ್ಯಾಟರಿಗಳನ್ನು ಕಳವು ನಡೆಸಿದ್ದರು. ಕೊಲ್ಯ ಬಳಿ ಉತ್ತರ ಕರ್ನಾಟಕದಿಂದ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ಚೂರಿ ತೋರಿಸಿ ಹಣ ದರೋಡೆ ಮಾಡಿದ್ದರು. ಉಚ್ಚಿಲ ಬಳಿ ಕೇರಳಕ್ಕೆ ಸಂಚರಿಸುವ ಕಾರುಗಳಿಂದ  ದರೋಡೆ ನಡೆಸಿದ ಅನೇಕ ಘಟನೆಗಳು ನಡೆದಿವೆ. ಕೊಲ್ಯ ಬಳಿ ಬೈಕ್‌ ಕಳವು ನಡೆಸಿದ್ದ ಕಳ್ಳರು ಪ್ರತಿ ಬಾರಿ ಬೈಕ್‌ ಮತ್ತು ಬಿಳಿ ಕಾರಿನಲ್ಲಿ ಬಂದು ಕಳವು ನಡೆಸುತ್ತಿದ್ದರು. ಟಯರ್‌ ಕಳವು ನಡೆಸಿದ ಪ್ರಕರಣದಲ್ಲಿ ಎರಡು ಬೈಕ್‌ಗಳಲ್ಲಿ ಮತ್ತು ಒಂದು ಕಾರು ಈ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸಿದ   ದೃಶ್ಯಾವಳಿ ಹೆದ್ದಾರಿಯ ಇನ್ನೊಂದು ಬಿದಿಯಲ್ಲಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಇಬ್ಬರನ್ನು ಪೊಲೀಸರಿಗೊಪ್ಪಿಸಿದ್ದರು
ಎರಡು ವಾರಗಳ ಹಿಂದೆ ಕೊಲ್ಯ ಸಮೀಪದ ಗ್ಯಾರೇಜ್‌ ಬಳಿ ನಿಲ್ಲಿಸಲಾ ಗಿದ್ದ ಮಿನಿ ಲಾರಿಯೊಂದರ ಬ್ಯಾಟರಿ ಮತ್ತು  ಡೀಸೆಲ್‌ ಕಳವು ನಡೆಸುತ್ತಿದ್ದಾಗ ಮಂಗಳೂರಿನಿಂದ ವಾಪಸಾಗುತ್ತಿದ್ದ ಸ್ಥಳೀಯ ಯುವಕರು ಮಿಲ್ಲತ್‌ನಗರದ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ದ್ದರು. ಈ ವ್ಯಾಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣದಲ್ಲಿ ಈ ಆರೋಪಿಗಳ ಕೈವಾಡ ಇರುವ ಸಾಧ್ಯತೆ ಇದ್ದು, ಇದರ ಒಂದು ಜಾಲವೇ ಈ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕುರಿತು ಸ್ಥಳೀಯರು ಆರೋಪ ಮಾಡಿದ್ದು, ಪೊಲೀಸರು  ಈ ನಿಟ್ಟಿನಲ್ಲಿ  ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next