ಕೊಳ್ನಾಡು : ಉದ್ಯೋಗ ಖಾತ್ರಿ ಯೋಜನೆ ಗ್ರಾಮಾಭಿವೃದ್ಧಿಯಲ್ಲಿ ಮಹತ್ವದ ಯೋಜನೆ ಎಂದು ಅರಿತುಕೊಂಡು ಸಮುದಾಯ ತೊಡಗಿಸಿಕೊಂಡಾಗ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆ ಈಡೇರಲು ಸಾಧ್ಯ. ಈ ನಿಟ್ಟಿನಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಮಾದರಿ ಕಾರ್ಯಕ್ರಮ ರೂಪಿಸಿಕೊಂಡಿದೆ ಹಾಗೂ ನಮ್ಮ ಗ್ರಾಮ ನಮ್ಮ ಯೋಜನೆಯಲ್ಲಿ ರಾಜ್ಯ ಪ್ರಶಸ್ತಿ ಬಂದಿರುವುದು ಕೂಡ ಅಭಿನಂದನಾರ್ಹ ಎಂದು ಎಂಜಿಎನ್‌ಆರ್ ಇಜಿಎಯ ಒಂಬುಡ್ಸ್‌ಮೆನ್ ನರಸಿಂಹ ಮೊಗೇರ ಅಭಿಪ್ರಾಯಪಟ್ಟರು.
ಅವರು ಗ್ರಾ.ಪಂ. ವ್ಯಾಪ್ತಿಯ ಕಾಡುಮಠ ಶಾಲಾ ವಠಾರದಲ್ಲಿ ಅಕ್ಷರ ಕೈತೋಟ ಕಾಮಗಾರಿ ವೀಕ್ಷಿಸಿ ಮತ್ತು ವಿಶ್ವ ಕೈ ತೊಳೆಯುವ ದಿನಾಚರಣೆ, ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಹಾಗೂ ಉದ್ಯೋಗ ಖಾತರಿ ಫಲಾನುಭವಿಗಳ ಕುಟುಂಬಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿ ವಾರ್ಡ್‌ನಲ್ಲಿ ಕಾಯಕ ಸಂಘಗಳನ್ನು ರಚಿಸುವ ಮೂಲಕ ಇನ್ನು ಹೆಚ್ಚಿನ ಗಮನ ನೀಡಲು ಸಲಹೆ ನೀಡಿದರು.
ಮಾಜಿ ಒಂಬುಡ್ಸ್‌ಮೆನ್ ಹಾಗೂ ಸ್ವಚ್ಛತಾ ರಾಯಭಾರಿ ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ನಿಯಮದಂತೆ ಯೋಜನೆ ಅನುಷ್ಠಾನಗೊಳಿಸಬೇಕಾದಲ್ಲಿ ಸಾರ್ವಜನಿಕರು ಪಂಚಾಯತ್‌ನೊಂದಿಗೆ ಸಹಕರಿಸುವ ಅಗತ್ಯವಿದೆ. ಕರ್ತವ್ಯಗಳ ಬಗ್ಗೆ ಅರಿತು ಎಲ್ಲರೂ ಕೆಲಸ ಮಾಡಿದಲ್ಲಿ ಯೋಜನೆ ಯಶಸ್ವಿಯಾಗಲು ಸಾಧ್ಯ. ಕೊಳ್ನಾಡಿನ ಮಹಿಳೆಯರು ಇದನ್ನು ಅರಿತು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದು ಇನ್ನಷ್ಟು ಬೆಳೆಯಲಿ ಎಂದರು.
ಕಾಯಕ ಸಂಘದ ಸದಸ್ಯರು ಸಂವಾದದಲ್ಲಿ ಭಾಗವಹಿಸಿ, ತಮಗೆ ಆರ್ಥಿಕತೆಕ್ಕಿಂತಲೂ ಹೆಚ್ಚು ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡ ತೃಪ್ತಿ, ಸಂತೋಷ ಇದೆ ಎಂದರು. ಗ್ರಾ.ಪಂ. ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಪಂ. ಸದಸ್ಯರಾದ ಎಸ್. ಮಹಮ್ಮದ್, ಇಂದ್ರಾವತಿ, ಅನಿತಾ ಹಾಗೂ
ಪವಿತ್ರಾ ಪೂಂಜ ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಸುಧೀರ್ ಸ್ವಾಗತಿಸಿ, ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ವಂದಿಸಿದರು. ಜನಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಹಾಗೂ ಪ್ರೇರಕ ರಂಜಿತ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿ ವಾರ್ಡ್‌ಗಳಿಗೂ ವಿಸ್ತರಣೆ
ಅಧ್ಯಕ್ಷತೆ ವಹಿಸಿದ್ದ ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಸಾರ್ವಜನಿಕರು ಈ ರೀತಿ ಯೋಜನೆಯಲ್ಲಿ ತೊಡಗಿಸಿಕೊಂಡಿರುವುದು ನಮಗೂ ಸ್ಫೂರ್ತಿ ನೀಡಿದೆ. ಕಾಡುಮಠ ಎಸ್‌ಸಿ ಕಾಲನಿ ಮಹಿಳೆಯರು ಮಾಡಿದ ಈ ಮಾದರಿ ಕಾರ್ಯವನ್ನು ಗ್ರಾಮದ ಪ್ರತಿ ವಾರ್ಡ್‌ಗಳಿಗೂ ವಿಸ್ತರಿಸಲು ಮಹಿಳಾ ಸ್ವ ಸಹಾಯ ಗುಂಪುಗಳ ಮೂಲಕ ಪ್ರಯತ್ನಿಸಲಾಗುವುದು ಎಂದರು.