ಚೆನ್ನೈ: 80ರ ದಶಕದ ಮಾದಕ ನಟಿ, ಪಡ್ಡೆ ಹೈಕಳ ನಿದ್ದೆಗೆಡಿಸಿದ ಸಿಲ್ಕ್ ಸ್ಮಿತಾ ಇಂದು ಇದ್ದಿದ್ದರೆ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅವರಿಂದು ನಮ್ಮೊಂದಿಗಿಲ್ಲ. ಆದರೆ ಅವರು ಸಿನಿಮಾದಲ್ಲಿ ನಟಿಸಿ ಇಂಡಸ್ಟ್ರಿಯಲ್ಲಿ ಸದ್ದು ಮಾಡಿ ಹೋದ ನೆನಪುಗಳಿವೆ.
400 ಕ್ಕೂ ಅಧಿಕ ಸಿನಿಮಾದಲ್ಲಿ ಕಾಣಿಸಿಕೊಂಡು, ನೂರಾರು ಸಿನಿಮಾದ ಹಾಡಿನಲ್ಲಿ ಸೊಂಟ ಬಳುಕಿಸಿ, ಹಾಟ್ ಬೆಡಗಿಯಾಗಿ ಕಾಣಿಸಿಕೊಂಡಿದ್ದ ಸಿಲ್ಕ್ ಸ್ಮಿತಾ ಅವರ ನಿಗೂಢ ಸಾವು ಇಂದಿಗೂ ಸಿನಿಮಾರಂಗದಲ್ಲಿ ರಹಸ್ಯವಾಗಿಯೇ ಉಳಿದಿದೆ.
ಸಿಲ್ಕ್ ಸ್ಮಿತಾ ಅವರ ಸಿನಿಮಾರಂಗದಲ್ಲಿ ಎಷ್ಟು ಜನಪ್ರಿಯರಾದರೋ, ಅಷ್ಟೇ ಸವಾಲು – ಸಂಕಷ್ಟಗಳನ್ನು ದಾಂಪತ್ಯ ಜೀವನದಲ್ಲೂ ಅನುಭವಿಸಿದ್ದಾರೆ. 1980ರಲ್ಲಿ ಬಂದ ‘ವಂದಿಚಕ್ಕರಂ’ ಸಿನಿಮಾದಲ್ಲಿ ಸಿಲ್ಕ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ಆ ಬಳಿಕ ಸಿನಿಮಾರಂಗದಲ್ಲಿ ಸಿಲ್ಕ್ ಸ್ಮಿತಾ ಎಂದೇ ಖ್ಯಾತರಾದರು.
ಸಿಲ್ಕ್ ಸ್ಮಿತಾ ಅವರ ಜೀವನದಲ್ಲಿ ನಡೆದ ಕೆಲ ಸಂಗತಿಗಳು ಅವರ ನಿಗೂಢ ಸಾವು.. ಹೀಗೆ ಅವರ ಬದಕಿನ ಕಥೆಯನ್ನು ಆಧಾರಿಸಿ ಈಗಾಗಲೇ ಸಿನಿಮಾಗಳು ಬಂದಿವೆ. ಇದರಲ್ಲಿ ಹೆಚ್ಚು ಗಮನ ಸೆಳೆದದ್ದು, ವಿದ್ಯಾ ಬಾಲನ್ ಅಭಿನಯಿಸಿದ ʼಡರ್ಟಿ ಪಿಕ್ಚರ್ʼ.
ಇದೀಗ ಸಿಲ್ಕ್ ಸ್ಮಿತಾ ಅವರ 63ನೇ ಜನ್ಮ ದಿನದ ಸ್ಮರಣೆಯಂದು, ಅವರ ಬದಕಿನ ಕಥೆಯನ್ನೊಳಗೊಂಡ ಹೊಸ ಸಿನಿಮಾವೊಂದರ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದಕ್ಕೆ “ಸಿಲ್ಕ್ ಸ್ಮಿತಾ” – ಅನ್ ಟೋಲ್ಡ್ ಸ್ಟೋರಿ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾವನ್ನು ಜಯರಾಮ್ ಶಂಕರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು ʼಸ್ವೀಟ್ ಕಾರಮ್ ಕಾಫಿʼ ಎನ್ನುವ ಸಿರೀಸ್ ಮಾಡಿದ್ದರು.
ʼಸಿಲ್ಕ್ ಸ್ಮಿತಾʼ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಇಂಡೋ – ಆಸ್ಟೇಲಿಯ ನಟಿ – ಮಾಡೆಲ್ ಚಂದ್ರಿಕಾ ರವಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇವರು ಈಗಾಗಲೇ ತಮಿಳು – ತೆಲುಗು ಸಿನಿಮಾಗಳಲ್ಲಿ ಕೆಲ ಪಾತ್ರಗಳನ್ನು ಮಾಡಿದ್ದಾರೆ.
ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದೆ.