ಚೆನ್ನೈ: ಕಾಲಿವುಡ್ ಸಿನಿರಂಗದ ಖ್ಯಾತ ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಮಾರಿಮುತ್ತು(30) ನಿಧನರಾಗಿದ್ದಾರೆ.
ಮಾರಿ ಸೆಲ್ವರಾಜ್ ಕಾಲಿವುಡ್ ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಸೆಲ್ವರಾಜ್ ಅವರ ನಿರ್ದೇಶನ ತಂಡದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಮಾರಿಮುತ್ತು ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂ ಬಳಿಯ ತಿರುಪುಲಿಯಂಗುಡಿ ಗ್ರಾಮದವರು.
ಮಾರಿಮುತ್ತು ಸೆಲ್ವರಾಜ್ ಅವರ ಸೂಪರ್ ಹಿಟ್ ಚಿತ್ರ, ಧನುಷ್ ಅಭಿನಯದ ʼಕರ್ಣನ್ʼ ಹಾಗೂ ಇತ್ತೀಚೆಗೆ ತೆರೆಕಂಡ ʼಮಾಮಣ್ಣನ್ʼ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಮುಂದೆ ತೆರೆ ಕಾಣಲಿರುವ ʼ ವಾಝೈʼ ಸಿನಿಮಾದಲ್ಲೂ ಮಾರಿ ಸೆಲ್ವರಾಜ್ ಅವರ ಸಹಾಯಕ ನಿರ್ದೇಶಕರಾಗಿ ಮಾರಿಮುತ್ತು ಕೆಲಸ ಮಾಡುತ್ದಿದ್ದರು.
ಅತಿಯಾದ ಧೂಮಪಾನ ಸಾವಿಗೆ ಕಾರಣವಾಯಿತೆ?: ಮಾರಿಮುತ್ತು ಅವರಿಗೆ ವಿಪರೀತ ಸಿಗರೇಟು ಸೇದುವ ಚಟವಿತ್ತು. ಇದರಿಂದ ಅವರಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಯೂ ಕಂಡುಬಂದಿತ್ತು. ಪ್ರತಿನಿತ್ಯ ಸಾವಿನ ದಿನವೂ ಅವರು ಸಿಗರೇಟು ಎಳೆಯುತ್ತಿದ್ದರು. ಈ ವೇಳೆ ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಹೊತ್ತು ಆಸ್ಪತ್ರೆಯಲ್ಲಿದ್ದ ಅವರು ಆ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು ಎಳೆದಿದ್ದಾರೆ ಎಂದು ವರದಿ ಆಗಿದೆ.
ಯುವ ಸಹಾಯಕ ನಿರ್ದೇಶಕನ ಸಾವಿನ ಸುದ್ದಿ ಕೇಳಿ ಕಾಲಿವುಡ್ ಶಾಕ್ ಆಗಿದ್ದು, ಈ ಬಗ್ಗೆ ನಿಖರವಾದ ಕಾರಣ ತಿಳಿಯಲು ಶ್ರೀವೈಕುಂಡಂ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಾರಿಮುತ್ತು ಪತ್ನಿ ಹಾಗೂ 5 ವರ್ಷದ ಮಗನನ್ನು ಅಗಲಿದ್ದಾರೆ. ಮುಂದಿನ ವರ್ಷ ಮಾರಿಮುತ್ತು ತಾವೇ ನಿರ್ದೇಶನಕ್ಕೆ ಇಳಿಯುವ ಯೋಜನೆ ಹಾಕಿಕೊಂಡಿದ್ದರು. ಇದಕ್ಕಾಗಿ ಅವರು ಕಥೆಯನ್ನು ಬರೆದಿದ್ದರು ಎಂದು ವರದಿ ತಿಳಿಸಿದೆ.