Advertisement

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

01:18 PM May 08, 2024 | Team Udayavani |

ಚೆನ್ನೈ: ಕಾಲಿವುಡ್‌ ಸಿನಿಮಾರಂಗದ ಖ್ಯಾತ ನಟರಲ್ಲಿ ಒಬ್ಬರಾಗಿರುವ ರಾಘವ ಲಾರೆನ್ಸ್‌ ಬಣ್ಣದ ಜಗತ್ತಿನಲ್ಲಿ ಎಷ್ಟು ಸರಳವಾಗಿರುತ್ತಾರೋ, ನಿಜ ಜೀವನದಲ್ಲೂ ಮಾನವೀಯ ಗುಣವುಳ್ಳ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿ ಆಗಿದ್ದಾರೆ. ಅವರ ಸಮುಜಮುಖಿ ಕಾರ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಬಡತನದಲ್ಲೇ ಬೆಳೆದು ಬಂದು, ಡ್ಯಾನ್ಸರ್‌ ಆಗಿ ಕಾಲಿವುಡ್‌ ರಂಗಕ್ಕೆ ಎಂಟ್ರಿ ಕೊಟ್ಟ ರಾಘವ ಲಾರೆನ್ಸ್‌ ಇಂದು ಕಾಲಿವುಡ್‌ ಸಿನಿರಂಗದಲ್ಲಿ ಎಷ್ಟು ದೊಡ್ಡಮಟ್ಟಕ್ಕೆ ಬೆಳೆದರೂ ತಾನು ನಡೆದು ಬಂದ ಬಡತನದ ಹಾದಿಯನ್ನು ಹಾಗೂ ಕಷ್ಟವನ್ನು ಮಾತ್ರ ಮರೆತಿಲ್ಲ. ಅವರು ಬಡತನದಲ್ಲಿರುವವರಿಗೆ ಭರವಸೆ ಬದುಕನ್ನು ನೀಡುವ ಆಶದಾಯಕ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಘವ ಲಾರೆನ್ಸ್‌ ಅವರು ಕಳೆದ ಕೆಲ ಸಮಯದಿಂದ ಹತ್ತಾರು ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ತಾನು ದುಡಿದ ಹಣದಲ್ಲಿ ಅರ್ಧ ಹಣವನ್ನು ಸಮಾಜ ಸೇವೆ ಹಾಗೂ ಬಡತನದಲ್ಲಿರುವವರ ದುಃಖವನ್ನು ನೀಗಿಸುವುದಕ್ಕೆ ಬಳಸುತ್ತಿದ್ದಾರೆ.

ಇವರ ಈ ಕಾರ್ಯಕ್ಕೆ ಯೂಟ್ಯೂಬರ್‌ ಹಾಗೂ ನಟ ಬಾಲಾ ಅವರು ಕೈಜೋಡಿಸಿದ್ದಾರೆ. ಇತ್ತೀಚೆಗೆ ರಾಘವ ಲಾರೆನ್ಸ್‌ ಹತ್ತು ಲಾರಿಗಳಲ್ಲಿ, ಹತ್ತು ಟ್ರ್ಯಾಕ್ಟರ್‌ ಗಳನ್ನು  ತುಂಬಿಸಿಕೊಂಡು ಹಳ್ಳಿಯೊಂದಕ್ಕೆ ತೆರಳಿ ಅಲ್ಲಿರುವ ಬಡ ರೈತರನ್ನು ಗುರುತಿಸಿ ಅವರಿಗೆ ಟ್ರ್ಯಾಕ್ಟರ್‌ ಗಳನ್ನು ಉಡುಗೊರೆ ರೂಪದಲ್ಲಿ ವಿತರಣೆ ಮಾಡಿದ್ದರು. ಇವರ ಈ ಕಾರ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇದೀಗ ಇಂಥದ್ದೇ ಮತ್ತೊಂದು ಮಹಾನ್‌ ಕಾರ್ಯವನ್ನು ಲಾರೆನ್ಸ್‌ ಮಾಡಿದ್ದಾರೆ.  ಕೆಲ ದಿನಗಳ ಹಿಂದಷ್ಟೇ ಲಾರೆನ್ಸ್‌ ಹಾಗೂ ಬಾಲಾ ಅವರು ಮಹಿಳೆಯೊಬ್ಬರಿಗೆ ಆಟೋವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಈ ವೇಳೆ ಇಬ್ಬರು ಆಟೋ ಓಡಿಸುವ ಇತರೆ ಮಹಿಳೆಯರನ್ನು ಭೇಟಿ ಆಗಿದ್ದರು. ಆಗ ಮಹಿಳೆಯರು ತಾವು ದುಡಿಯುತ್ತಿರುವ ಅರ್ಧ ಹಣ ಆಟೋ ಕೊಳ್ಳಲು ತೆಗೆದುಕೊಂಡ ಸಾಲವನ್ನು ತೀರಿಸಲು ಹೋಗುತ್ತದೆ ಎಂದು ತನ್ನ ಆಳಲನ್ನು ಹೇಳಿಕೊಂಡಿದ್ದರು.

Advertisement

ಇದೀಗ ಲಾರೆನ್ಸ್‌ ಹಾಗೂ ಬಾಲಾ ಅವರು ಸೇರಿಕೊಂಡು ತಾವು ಭೇಟಿಯಾದ ಆಟೋ ಚಾಲಕಿಯರ ಬ್ಯಾಂಕ್‌ ಸಾಲವನ್ನು ತಾವೇ ತೀರಿಸಿದ್ದಾರೆ.  ಮೂಲಕ ದುಡಿಮೆ ಹಣ ಮಹಿಳಯರಲ್ಲೇ ಉಳಿಯುವಂತೆ ಮಾಡಿದ್ದಾರೆ.

ಲಾರೆನ್ಸ್‌ ಹಾಗೂ ಬಾಲಾ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಮಹಿಳೆಯರು ಲಾರೆನ್ಸ್‌ ಅವರನ್ನು ತಬ್ಬಿಕೊಂಡು ಖುಷಿಯ ಕಣ್ಣೀರು ಹಾಕಿದ್ದಾರೆ. ಈ ಸನ್ನಿವೇಶದ ವಿಡಿಯೋ ವೈರಲ್‌ ಆಗಿದೆ.

ಕಾಲಿವುಡ್‌ ಗೆ ಬರುವ ಮುನ್ನ ಲಾರೆನ್ಸ್‌ ಕಾರು ತೊಳೆಯುವ ಕೆಲಸವನ್ನು ಮಾಡುತ್ತಿದ್ದರು. ಡ್ಯಾನ್ಸರ್‌ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಕಷ್ಟಪಟ್ಟು ತನ್ನ ಪ್ರತಿಭೆಯಿಂದಲೇ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡರು. ಇಂದು ಕಾಲಿವುಡ್‌ ನಲ್ಲಿ ಖ್ಯಾತ ನಟರಾಗಿ ಅವರು ಗುರುತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next