Advertisement

ಕೊಲ್ಲೂರು ನೀರಿನ ಸಮಸ್ಯೆ ಕೊನೆಗೂ ಪರಿಹಾರ

11:11 PM Feb 02, 2020 | Sriram |

ಕೊಲ್ಲೂರು: ಬಹಳಷ್ಟು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೊಲ್ಲೂರು ಗ್ರಾಮಸ್ಥರಿಗೆ ಕಾಶಿ ಹೊಳೆ ಬಳಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟು ಈ ಬಾರಿ ಬೇಸಗೆಯಲ್ಲಿ ನೀರೊದಗಿಸಲಿದ್ದು ಜನರ ಬೇಡಿಕೆಯನ್ನು ಈಡೇರಿಸಲಿದೆ.

Advertisement

33 ಕೋಟಿ ರೂ. ವೆಚ್ಚ
ಕರ್ನಾಟಕ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯ ನೇತೃತ್ವದಲ್ಲಿ ಕಳೆದ 3 ವರ್ಷಗಳ ಹಿಂದೆ ಆರಂಭಗೊಂಡಿರುವ ವೆಂಟೆಡ್‌ ಡ್ಯಾಮ್‌ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅಂತಿಮ ಹಂತದ ಕೆಲಸಗಳಷ್ಟೇ ಬಾಕಿ ಇವೆ. ಡ್ಯಾಂಗೆ ಮೆಕ್ಯಾನಿಕಲ್‌ ಗೇಟ್‌ ಅಳವಡಿಸಲಾಗಿದೆ. ಈ ತಾಂತ್ರಿಕ ವ್ಯವಸ್ಥೆಯಿಂದಾಗಿ ಬಹಳಷ್ಟು ವರ್ಷಗಳ ಕಾಲ ಗೇಟು ಬಾಳಿಕೆ ಬರುತ್ತದೆ ಮತ್ತು ಇದರ ನಿರ್ವಹಣೆಯೂ ಅತ್ಯಂತ ಸುಲಭವಾಗಿದೆ.

11 ಮೀ. ನೀರು ಸಂಗ್ರಹಣೆ
ಸೌಪರ್ಣಿಕ ಹಾಗೂ ಅರಶಿನಗುಂಡಿಯಿಂದ ಹರಿದುಬರುವ ನೀರನ್ನು ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹಿಸಲಾಗುತ್ತಿದೆ. ಈಗ ಇದರಲ್ಲಿ 9 ಮೀಟರ್‌ನಷ್ಟು ನೀರಿನ ಶೇಖರವಾಗಿದೆ. ಒಟ್ಟು 11 ಮೀ. ನಷ್ಟು ನೀರು ಸಂಗ್ರಹಿಸಬಹುದು. ಮುಂದಿನ 3 ತಿಂಗಳ ಕಾಲ ಗ್ರಾಮಸ್ಥರು ನೀರು ಉಪಯೋಗಿಸಬಹುದಾಗಿದೆ. ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೊನೆಯ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ.

ನಿರ್ವಹಣೆ ಜವಾಬ್ದಾರಿ ಯಾರಿಗೆ?
ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿರುವ ಕರ್ನಾಟಕ ನೀರು ಸರಬರಾಜು ಮಂಡಳಿ ಮತ್ತು ಕೊಲ್ಲೂರು ಗ್ರಾ.ಪಂ. ಸೇರಿ ಕೊಲ್ಲೂರು ದೇಗುಲದ ಸಮಿತಿ ಹಾಗು ಕಾರ್ಯನಿರ್ವಹಣಾಧಿಕಾರಿಗಳ ಸಮಕ್ಷಮದಲ್ಲಿ ನಿರ್ವಹಣೆ ಜವಾಬ್ದಾರಿ ಕೈಗೊಳ್ಳುವುದು ಬಾಕಿ ಇದೆ. ನಿರ್ವಹಣೆಯಲ್ಲಿ ಮನೆಮನೆಗೆ ಜೋಡಿಸಲಾಗುವ ನೀರಿನ ಪೈಪ್‌, ನೀರು ಸರಬರಾಜು ವೆಚ್ಚ ಹಾಗು ಮೀಟರ್‌ ಜೋಡಣೆಯ ವಿಚಾರವೂ ಸೇರಿದೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆದು ಅಂತಿಮ ತೀರ್ಮಾನ ಹೊರಬೀಳಲಿದೆ.

ಇಡೀ ಕೊಲ್ಲೂರಿಗೆ ನೀರು ದಕ್ಕೀತೆ?
2011ರ ಜನಗಣತಿ ಪ್ರಕಾರ ಕೊಲ್ಲೂರಿನಲ್ಲಿ 3241 ಜನ ವಾಸ್ತವ್ಯವಿದ್ದಾರೆ. ಕೊಲ್ಲೂರು ಪರಿಸರ, ಕಲ್ಯಾಣಿಗುಡ್ಡೆ, ಹೆಗ್ಡೆಹಕ್ಲು, ಸುಬ್ಬರಸನ ತೊಪು ಮತ್ತು ದಳಿಯಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾಗಿದೆ. 13 ಉಪಗ್ರಾಮ ಹೊಂದಿರುವ ಕೊಲ್ಲೂರಿನ ಮಾವಿನಕಾರು,ಹಳ್ಳಿಬೇರು, ಸಂಪ್ರೇ ಮುಂತಾದೆಡೆಯ ನಿವಾಸಿಗಳ ಪ್ರತಿ ಮನೆಗೂ ಪೈಪ್‌ ಲೈನ್‌ ಅಳವಡಿಸುವುದು ಸದ್ಯದ ದಿನಗಳಲ್ಲಿ ಕಷ್ಟಸಾಧ್ಯ ಎನ್ನಲಾಗಿದೆ.

Advertisement

ಕೊಲ್ಲೂರು ದೇವಸ್ಥಾನದಲ್ಲಿ ಎಪ್ರಿಲ್‌ – ಮೇ ತಿಂಗಳ ಅವಧಿಯಲ್ಲಿ ನೀರಿನ ಸಮಸ್ಯೆ ಅಧಿಕ‌ವಾಗಿದ್ದು ಈ ವರೆಗೆ ನದಿ ನೀರು, ಖಾಸಗಿ ನೀರು ಸರಬರಾಜುದಾರರಿಂದ ಟ್ಯಾಂಕ್‌ ಮೂಲಕ ನೀರನ್ನು ಸಂಗ್ರಹಿಸಿ ದೇಗುಲದ ವಸತಿಗೃಹ ಸಹಿತ ಇನ್ನಿತರ ವ್ಯವಸ್ಥೆಗಳಿಗೆ ಬಳಸಲಾಗುತ್ತಿತ್ತು. ಹೊಟೇಲ್‌, ಖಾಸಗಿ ವಸತಿಗೃಹ ಸಹಿತ ಗ್ರಾಮಸ್ಥರು ಎಪ್ರಿಲ್‌ – ಮೇ ತಿಂಗಳಲ್ಲಿ ಬತ್ತಿದ ಬಾವಿಗಳಿಂದಾಗಿ ಅನೇಕ ಭಕ್ತರು ದೂರದ ಹೆಮ್ಮಾಡಿ, ಬೈಂದೂರು, ಕುಂದಾಪುರ ಮುಂತಾದೆಡೆ ವಸತಿ ಸೌಕರ್ಯ ಒದಗಿಸಿಕೊಂಡು ಶ್ರೀದೇವಿಯ ದರ್ಶನಕ್ಕೆ ಆಗಮಿಸುವ ಪರಿಸ್ಥಿತಿ ಎದುರಾಗಿತ್ತು.

ನೀರಿನ ಅಭಾವವನ್ನು ನೀಗಿಸುವಲ್ಲಿ ಕೊಲ್ಲೂರು ದೇಗುಲದ ವತಿಯಿಂದ ನಿರ್ಮಿಸಲಾಗಿರುವ ಈ ಕಿಂಡಿ ಆಣೆಕಟ್ಟು ಯೋಜನೆ ಜಲಕ್ಷಾಮದ ಭೀತಿಗೆ ಶಾಶ್ವತ ಪರಿಹಾರ ಒದಗಿಸಿದಂತಾಗಿದೆ.

ಕೊಲ್ಲೂರು ಜನತೆಯ ಬಹುಬೇಡಿಕೆಯ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದು ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ನಿರ್ವಹಣೆಯಾಗಬೇಕು. ಇದರೊಂದಿಗೆ ಅಂತರ್ಜಲ ಮಟ್ಟ ಏರಿಸಲು ನೀರಿಂಗಿಸುವ ಕೆಲಸವನ್ನೂ ಆಡಳಿತ ಸಾರ್ವಜನಿಕರೊಂದಿಗೆ ಸೇರಿ
ಕೈಗೊಳ್ಳುವಂತಾಗಬೇಕೆನ್ನುವುದು ಆಶಯ.

ಚರ್ಚಿಸಿ ತೀರ್ಮಾನ
ಕುಡಿಯುವ ನೀರಿನ ಸರಬರಾಜು ಹಾಗೂ ನಿರ್ವಹಣೆಯ ಜವಾಬ್ದಾರಿ ಬಗ್ಗೆ ಇಲಾಖೆಯ ನಡುವೆ ಈವರೆಗೆ ಮಾತುಕತೆ ನಡೆದಿಲ್ಲ.ಮುಂದಿನ ದಿನಗಳಲ್ಲಿ ಆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ರಾಜೇಶ್‌, ಪಿ.ಡಿ.ಒ.,ಕೊಲ್ಲೂರು ಗ್ರಾ.ಪಂ.

ಕಾಮಗಾರಿ ಅಂತಿಮ ಹಂತದಲ್ಲಿದೆ
ಕೊಲ್ಲೂರು ಜನತೆಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ನಿರ್ಮಿಸಲು ರಾಜ್ಯ ಸರಕಾರದ ಅನುಮತಿ ಮೇರೆಗೆ ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ಕಾಮಗಾರಿ ಅಂತಿಮ ಹಂತದಲ್ಲಿದೆ.ಈ ಬೇಸಗೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರಿಗೆ ನೀರಿನ ಕ್ಷಾಮ ಎದುರಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
– ಅರವಿಂದ ಎ.ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ,
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ

65 ಕೋ.ರೂ. ಹಣ ಬಿಡುಗಡೆ
ದೇವಸ್ಥಾನದ ವತಿಯಿಂದ ವೆಂಟೆಡ್‌ ಡ್ಯಾಮ್‌, ಭೋಜನ ಶಾಲೆ ಹಾಗು ಒಳಚರಂಡಿ ವ್ಯವಸ್ಥೆಗೆ 65 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಕ್ಷಾಮ ನಿಭಾಯಿಸಲು ಈ ಕಿಂಡಿ ಅಣೆಕಟ್ಟು ಸಹಾಯಕವಾಗಲಿದೆ.
– ಹರೀಶ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ದೇಗುಲ ವ್ಯವಸ್ಥಾಪನ ಸಮಿತಿ

-ಡಾ|ಸುಧಾಕರ್‌ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next