Advertisement

ಪೂರ್ಣಕಾಲಿಕ ವೈದ್ಯರಿಲ್ಲದ ಕೊಲ್ಲೂರು ಪಶು ಚಿಕಿತ್ಸಾಲಯ

03:31 PM Jan 12, 2023 | Team Udayavani |

ಕೊಲ್ಲೂರು : ಇಲ್ಲಿನ ಪಶು ಚಿಕಿತ್ಸಾಲಯ ಕಳೆದ 2 ತಿಂಗಳಿನಿಂದ ಮುಚ್ಚಿಕೊಂಡಿದ್ದು, ಹಸುಗಳ ಚಿಕಿತ್ಸೆಗೆಂದು ಬಂದ ಮಂದಿ ವಾಪಾಸು ಹೋಗಬೇಕಾದ ಪರಿಸ್ಥಿತಿ ಕಂಡುಬಂದಿದೆ. ಆಸುಪಾಸಿನಲ್ಲಿ 1,000ಕ್ಕೂ ಮಿಕ್ಕಿ ವಿವಿಧ ತಳಿಗಳ ಗೋವುಗಳಿದ್ದು, ಅವುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಗ್ರಾಮ ನಿವಾಸಿಗಳು ಆತಂಕಗೊಂಡಿರುತ್ತಾರೆ, ಕೊಲ್ಲೂರು ದೇಗುಲದ ಗೋಶಾಲೆಯಲ್ಲಿರುವ 200ಕ್ಕೂ ಮಿಕ್ಕಿ ಗೋವುಗಳಿಗೆ ಪಶು ಚಿಕಿತ್ಸಾಲಯವನ್ನು ಅವಲಂಬಿಸಲಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ಹಸುಗಳಲ್ಲಿ ಕಂಡುಬರುತ್ತಿರುವ ಚರ್ಮರೋಗ ಸಹಿತ ವಿವಿಧ ಕಾಯಿಲೆಗಳಿಗೆ ಔಷಧೋಪಚಾರ ಮಾಡುವಲ್ಲಿ ಎದುರಾಗಿರುವ ವೈದ್ಯರ ಕೊರತೆ ಗ್ರಾಮಸ್ಥರನ್ನು ಆತಂಕಕ್ಕೆ ಎಡೆಮಾಡಿದೆ.

ಪೂರ್ಣಕಾಲಿಕ ವೈದ್ಯರ ಕೊರತೆ ಇಲ್ಲಿನ ಪಶು ಚಿಕಿತ್ಸಾಲಯದಲ್ಲಿ ಪೂರ್ಣಕಾಲಿಕ ವೈದ್ಯರು ಹಾಗೂ ಕಾಂಪೌಂಡ್‌ರ ಕೊರತೆ ಇದ್ದು, ಕಳೆದ 2 ತಿಂಗಳಿನಿಂದ ಚಿಕಿತ್ಸಾಲಯ ತೆರೆಯದಿರುವುದು ನಾನಾ ಪ್ರಶ್ನೆಗಳಿಗೆ ಎಡೆಮಾಡಿದೆ. ಅನೇಕರು ಗೋವುಗಳ ಚಿಕಿತ್ಸೆಗಾಗಿ ಬಹುದೂರದಿಂದ ಇಲ್ಲಿಗೆ ಆಗಮಿಸಿದರೂ ವೈದ್ಯರಿಲ್ಲದೇ ಚಿಕಿತ್ಸೆ ಪಡೆಯಲಾಗದೇ ವಾಪಾ ಸಾಗಬೇಕಾದ ಪರಿಸ್ಥಿತಿ ಕಂಡುಬಂದಿದೆ.

ಗೋವುಗಳಲ್ಲಿ ಕಂಡುಬರುತ್ತಿರುವ ಮರಣಾಂತಿಕ ಕಾಯಿಲೆಯಾಗಿರುವ ಚರ್ಮಗಂಟು ರೋಗ ನಿವಾರಣೆಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲದೇ ಅನೇಕ ಮಂದಿ ದೂರದ ಆಲೂರು, ವಂಡ್ಸೆ, ಕುಂದಾಪುರ ಮುಂತಾದೆಡೆಗೆ ಪಶುಗಳನ್ನು ಒಯ್ಯಬೇಕಾಗಿದೆ. ಬೈಂದೂರು, ಕಿರಿಮಂಜೇಶ್ವರ, ಕೊಲ್ಲೂರು, ಜಡ್ಕಲ್‌, ಹಳ್ಳಿಹೊಳೆಯ ಪಶು ಚಿಕಿತ್ಸಾಲಯದಲ್ಲಿ 5 ಮಂದಿ ವೈದ್ಯರಿರಬೇಕಿತ್ತು. ಆದರೆ ಕೇವಲ ಇಬ್ಬರು ವೈದ್ಯರನ್ನು ನೇಮಿಸಲಾಗಿದೆ.

ನಾಡಾ ವೈದ್ಯಾಧಿಕಾರಿ ಕೊಲ್ಲೂರು ಹಾಗೂ ಹಳ್ಳಿಹೊಳೆ ಆಸ್ಪತ್ರೆಗಳ ಜವಾಬ್ದಾರಿ ಹೊಂದಿರುತ್ತಾರೆ. ಕುಂದಾಪುರ ತಾಲೂಕಿನಲ್ಲಿ 92 ಹುದ್ದೆಗಳಿದ್ದು, 25 ವೈದ್ಯರು
ಹಾಗೂ ಸಿಬಂದಿ ಹುದ್ದೆ ಭರ್ತಿಯಾಗಿದೆ. 3 ಆಸ್ಪತ್ರೆ 6 ಪಶು ಚಿಕಿತ್ಸಾಲಯ, 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ. 11 ಪಶು ವೈದ್ಯಾಧಿಕಾರಿಗಳಿರಬೇಕಾದಲ್ಲಿ 3 ಜನ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಗ್ರಾ.ಪಂ ನೋಡಲ್‌ ಅಧಿಕಾರಿಗಳಾಗಿ ಜಮಾಬಂದಿ ಕಾರ್ಯಕ್ರಮಗಳು ಇನ್ನಿತರ ತಾಲೂಕಿನ ಆಡಳಿತ ಉಸ್ತುವಾರಿ ಅವರೇ ನೋಡಬೇಕಾಗಿದೆ. ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಪಶು ಚಿಕಿತ್ಸಾಲಯದಲ್ಲಿ ವೈದ್ಯರು ಹಾಗೂ ಸಿಬಂದಿ ಕೊರತೆ ಇದೆ. ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ
ಪಶು ವೈದಾಧಿಕಾರಿಗಳ ಕೊರತೆಯಿಂದ ಕೊಲ್ಲೂರು ಪರಿಸರ ನಿವಾಸಿಗಳ ಗೋಸಂರಕ್ಷಣೆ ಕಷ್ಟಕರವಾಗಿದೆ. ಸುಸೂತ್ರ ಚಿಕಿತ್ಸೆ ಲಭಿಸದೆ ಕೆಲವೊಂದು ಗೋವುಗಳು ಸಾವನ್ನಪ್ಪಿದ ಘಟನೆ ನಡೆದಿದೆ.
*ಗ್ರಾಮಸ್ಥರು, ಕೊಲ್ಲೂರು

ಸರಕಾರಕ್ಕೆ ಮನವಿ
ನೇಮಕಾತಿಗೊಂಡಿರುವ ವೈದ್ಯಾಧಿಕಾರಿಗಳು ವಿವಿಧ ಪಶು ಚಿಕಿತ್ಸಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇರುವ ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಾಡಿ ಕೆಲಸ ಕಾರ್ಯ ಮಾಡಬೇಕಾಗಿದೆ. ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
*ಡಾ| ಬಾಬಣ್ಣ ಪೂಜಾರಿ,
ಸಹಾಯಕ ನಿರ್ದೇಶಕರು, ಪಶು ಸಂಗೋಪನ ಇಲಾಖೆ ಕುಂದಾಪುರ

 ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next