Advertisement

ಕೊಲ್ಲೂರು: ಪೊಲೀಸ್‌ ಪೇದೆ ಆತ್ಮಹತ್ಯೆ

10:20 AM Feb 05, 2018 | Harsha Rao |

ಕೊಲ್ಲೂರು: ಕ್ಷುಲ್ಲಕ ಕಾರಣಕ್ಕೆ ಕೊಲ್ಲೂರು ಪೊಲೀಸ್‌ ಠಾಣೆಯ ಪೇದೆಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದು, ಸುದ್ದಿ ತಿಳಿದ ಅವರ ಪ್ರೇಯಸಿಯೂ ಬಾವಿಗೆ  ಹಾರಿ ಆತ್ಮಹತ್ಯೆಗೆತ್ನಿಸಿದ ಘಟನೆ ರವಿವಾರ ಸಂಭವಿಸಿದೆ. 

Advertisement

ಠಾಣೆಯಲ್ಲಿ 2014ರಿಂದ ಪೊಲೀಸ್‌ ಪೇದೆಯಾಗಿದ್ದ ನಾಗರಾಜ (27) ರವಿವಾರ ಬೆಳಗ್ಗೆ ತಾನು ವಾಸವಾಗಿದ್ದ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಜತೆಗಿದ್ದ ಇನ್ನೋರ್ವ ಪೊಲೀಸ್‌ ಸಿಬಂದಿ ಸಂದೀಪ್‌  ಕೆಲಸ ನಿಮಿತ್ತ ಗಂಗೊಳ್ಳಿ ಠಾಣೆಗೆ ತೆರಳಿದ್ದಾಗ ನಾಗರಾಜ್‌ ಈ ಕೃತ್ಯಗೈದಿದ್ದಾರೆ.

2014ರಲ್ಲಿ ಪೊಲೀಸ್‌ ಸೇವೆಗೆ ಸೇರಿದ್ದ ನಾಗರಾಜ ಮೂಲತಃ ದಾವಣಗೆರೆಯ ಮಲೆಬೆನ್ನೂರು ನಿವಾಸಿ. ಅವರು ಸಂದೀಪ್‌ ಜತೆಗೆ ಸೌಪರ್ಣಿಕಾ ಅತಿಥಿಗೃಹದಲ್ಲಿ ವಾಸವಾಗಿದ್ದರು. ನಾಗರಾಜ ಎರಡು ದಿನಗಳ ಹಿಂದೆ ಜೋಯ್ಡಾಗೆ ಬಂದೋಬಸ್ತಿಗೆಂದು ತೆರಳಿ ಶನಿವಾರ ಕೊಲ್ಲೂರಿಗೆ ವಾಪಸಾಗಿ ಸೇವೆಗೆ ಹಾಜರಾಗಿದ್ದರು. ನಾಗರಾಜ ಅವರಿಗೆ  ಕೊಲ್ಲೂರು ಠಾಣೆಯ ಮಹಿಳಾ ಪೇದೆ ಬೆಳಗಾವಿ ಮೂಲದ ರೇಷ್ಮಾ ಜತೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ.  ಇವರು ಪರಸ್ಪರ ಪ್ರೇಮಿಸುತ್ತಿದ್ದು, ಮದುವೆಗೆ ಮನೆಯವರು ಒಪ್ಪಿಗೆ ಸೂಚಿಸಿದ್ದರು.

ಕೊಠಡಿಯಲ್ಲಿ ಜತೆಗಿದ್ದ ಸಂದೀಪ್‌ ಜತೆಗೆ ನಾಗರಾಜ ಯಾವುದೇ ಸಮಸ್ಯೆ ಬಗ್ಗೆ ತಿಳಿಸಿರಲಿಲ್ಲ. ಸಂದೀಪ್‌ ಗಂಗೊಳ್ಳಿ ಠಾಣೆಯಿಂದ ಹಿಂದಿರುಗಿದಾಗ ಕೊಠಡಿ ಬಾಗಿಲು ಮುಚ್ಚಿಕೊಂಡಿದ್ದು, ನಾಗರಾಜನನ್ನು ಮೊಬೈಲ್‌ ಮೂಲಕ ಸಂಪರ್ಕಿಸಿದರೂ ಉತ್ತರ ಬಾರದಿರುವುದರಿಂದ ಸಂಶಯಗೊಂಡು ಹಿಂಬಾಗಿಲಿನ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ವಿಷಯ ತಿಳಿದು ಬಂತು. 

ಮುಳುವಾದ ಪ್ರೇಯಸಿ ರಜೆ  
ರೇಷ್ಮಾ ರಜೆ ತೆಗೆದುಕೊಳ್ಳುವ ಸಣ್ಣ ವಿಚಾರವು ಆತ್ಮಹತ್ಯೆಯಲ್ಲಿ ಪರ್ಯವಸಾನವಾಗಿದೆ ಎಂದು ಹೇಳಲಾಗುತ್ತಿದೆ. “ನೀನು ರಜೆ ತೆಗೆದುಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ನಾಗರಾಜ ಹೇಳಿದ್ದನೆನ್ನಲಾಗಿದೆ. ಈ ಹಿಂದೆಯೂ ಕೆಲವು ಬಾರಿ ಆತ ಇಂಥ ಬೆದರಿಕೆ ಹಾಕಿದ್ದರಿಂದ ಇದನ್ನು ರೇಷ್ಮಾ ಗಂಭೀರವಾಗಿ ಪರಿಗಣಿಸದೆ ರಜೆ ಹಾಕಲು ನಿರ್ಧರಿಸಿದ್ದರಿಂದ ನಾಗರಾಜ  ದುಡುಕಿನ ನಿರ್ಧಾರ ಕೈಗೊಂಡರು ಎಂದು ಹೇಳಲಾಗುತ್ತಿದೆ.

Advertisement

ರೇಷ್ಮಾ ಆತ್ಮಹತ್ಯೆ ಯತ್ನ
ನಾಗರಾಜ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಕೂಡಲೇ ರೇಷ್ಮಾ  ಅವರು ಕೂಡ ಕೊಲ್ಲೂರು ಠಾಣೆಯ ಬಾವಿಗೆ ಹಾರಿ ಆತ್ಮಹತ್ಯೆಗೆತ್ನಿಸಿದರು. ಕೂಡಲೇ ಪೊಲೀಸರು ಆಕೆಯನ್ನು ಬಾವಿಯಿಂದ ಮೇಲೆತ್ತಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪರಸ್ಪರ ಪ್ರೀತಿಸುತ್ತಿದ್ದ  ನಾಗರಾಜ ಹಾಗೂ ರೇಷ್ಮಾ ನಡುವಿನ ಸಂಬಂಧವು ಆತ್ಮಹತ್ಯೆಯಂಥ ದುರಂತದತ್ತ ಸಾಗಿರುವುದು ಸಹೋದ್ಯೋಗಿಗಳಲ್ಲಿ ಅಚ್ಚರಿ ಮೂಡಿಸಿದೆ. 

ಎಡಿಷನಲ್‌ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್‌ಪಿ ಪ್ರವೀಣ್‌ ಎಚ್‌. ನಾಯಕ್‌, ಬೈಂದೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಪರಮೇಶ್ವರ ಗುನಗ, ಕೊಲ್ಲೂರು ಎಸ್‌.ಐ. ಸುದರ್ಶನ ಸ್ಥಳಕ್ಕೆ ಭೇಟಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next