ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಭ್ರಮದಿಂದ ನವರಾತ್ರಿ ರಥೋತ್ಸವ ನಡೆಯಿತು.
ದೇಗುಲದ ತಂತ್ರಿಗಳಾದ ನಿತ್ಯಾನಂದ ಅಡಿಗರ ನೇತೃತ್ವದಲ್ಲಿ ಶತರುದ್ರ ಹೋಮ, ನವರಾತ್ರಿ ಪೂಜೆ, ಚಂಡಿಕಾ ಯಾಗ, ಮುಹೂರ್ತ ಬಲಿ, ಮಹಾಬಲಿಯ ಅನಂತರ ರಥಾರೋಹಣ ನಡೆಯಿತು.
ಕಾರ್ಯ ನಿರ್ವಹಣಾ ಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಸಂಕಲ್ಪದಲ್ಲಿ ಪಾಲ್ಗೊಂಡು ರಥೋತ್ಸವಕ್ಕೆ ಚಾಲನೆ ನೀಡಿದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಡಾ| ರಾಮಚಂದ್ರ ಅಡಿಗ, ಗಣೇಶ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಶೇಖರ ಪೂಜಾರಿ, ರತ್ನಾ ಆರ್. ಕುಂದರ್, ಸಂಧ್ಯಾರಮೇಶ, ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರು ಉಪಸ್ಥಿತರಿದ್ದರು.
ಸಾವಿರಾರು ಮಂದಿ ಸೌಪರ್ಣಿಕಾ ನದಿಯಲ್ಲಿ ತೀರ್ಥಸ್ನಾನ ಮಾಡಿ ಉಟ್ಟ ಬಟ್ಟೆಯಲ್ಲಿ ಶ್ರೀ ದೇವಿಯ ದರ್ಶನ ಪಡೆದು ಕೃತಾರ್ಥರಾದರು. ನವರಾತ್ರಿ ಉತ್ಸವಕ್ಕೆ 50 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು. ವಿಶೇಷ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅನೇಕ ಭಕ್ತರು ವಸತಿಗೃಹಗಳು ಭರ್ತಿಯಾದ ಕಾರಣ ವಾಸ್ತವ್ಯಕ್ಕೆ ಕುಂದಾಪುರ ಹಾಗೂ ಹೆಮ್ಮಾಡಿಯನ್ನು ಅವಲಂಬಿಸಬೇಕಾಯಿತು.
6,700 ಸಾವಿರ ಮಕ್ಕಳಿಗೆ ವಿದ್ಯಾರಂಭ
ವಿವಿಧ ರಾಜ್ಯಗಳ 6,700 ಭಕ್ತರು ತಮ್ಮ ಮಕ್ಕಳನ್ನು ವಿದ್ಯಾರಂಭಕ್ಕಾಗಿ ಕರೆತಂದಿದ್ದರು. ಸರಸ್ವತಿ ಮಂಟಪ ಸಹಿತ ವಿವಿಧೆಡೆ ವಿದ್ಯಾರಂಭ ಪ್ರಕ್ರಿಯೆಯನ್ನು ಅರ್ಚಕರು ನಡೆಸಿಕೊಟ್ಟರು. ಹರಿವಾಣದಲ್ಲಿ ತುಂಬಿಸಿದ ಅಕ್ಕಿಯ ಮೇಲೆ ಪುಟ್ಟ ಮಕ್ಕಳಿಂದ ನಾಣ್ಯ ಹಾಗೂ ಅರಶಿನ ಕೊಂಬಿನಿಂದ ಓಂಕಾರ ಬರೆಸುವ ಹಾಗೂ ಮಕ್ಕಳ ನಾಲಗೆಯ ಮೇಲೆ ಚಿನ್ನದ ನಾಣ್ಯದಿಂದ ಓಂಕಾರ ಬರವಣಿಗೆಯ ಸ್ಪರ್ಶ ಮಾಡುವ ಮೂಲಕ ಅಕ್ಷರಾಭ್ಯಾಸ ವಿಧಿ ನೆರವೇರಿತು. ಇತ್ತೀಚಿನ ವರ್ಷಗಳಲ್ಲಿ ಗರಿಷ್ಠ 5,480 ಮಕ್ಕಳು ಭಾಗವಹಿಸಿದ್ದರು.