ಮಂಗಳೂರು/ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ವೇಳೆಗೆ ಮಳೆಯಾಗಿದೆ.
ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಕಡಬ, ಉಜಿರೆ ಪರಿಸರದಲ್ಲಿ ಸಂಜೆ ವೇಳೆಗೆ ಮಳೆಯಾಗಿದೆ. ವೇಣೂರಿನ ಕೊಕ್ರಾಡಿಯಲ್ಲಿ ಅರ್ಧ ತಾಸು ಸಾಧಾರಣ ಮಳೆಯಾಗಿದೆ. ಉಳಿದೆಡೆ ಮೋಡ ಆವರಿಸಿತ್ತು. ಮೂಡಬಿದಿರೆಯಲ್ಲಿ ಮೋಡ ಆವರಿಸಿದ್ದು, ಪಡು ಮಾರ್ನಾಡು, ಮೂಡು ಮಾರ್ನಾಡಿನಲ್ಲಿ ಸಣ್ಣ ಪ್ರಮಾಣದ ಮಳೆ ಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕೊಲ್ಲೂರು ಪರಿಸರದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಗಾಳಿ ಮಳೆಗೆ ಹಾನಿ: ಸುಳ್ಯ ತಾಲೂಕಿನ ವಿವಿಧೆಡೆ ಗಾಳಿ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಪೆರುವಾಜೆ, ಜಾಲೂÕರು, ಗುತ್ತಿಗಾರು ಪರಿಸರದಲ್ಲಿ ಸುಮಾರು 20 ವಿದ್ಯುತ್ ಕಂಬಗಳು ತುಂಡಾಗಿವೆ. ಅಲ್ಲಲ್ಲಿ ಮರ ಬಿದ್ದಿವೆ. ನಾರ್ಣಕಜೆಯಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತು. ಕಡಬ ಸಮೀಪದ ನೆಟ್ಟಣ ಸೇತುವೆ ಬಳಿ ಮಳೆಯಿಂದಾಗಿ ಕಾರೊಂದು ಸ್ಕಿಡ್ ಆಗಿ ರಸ್ತೆ ಬದಿಯ ದರೆಗೆ ಢಿಕ್ಕಿಯಾಗಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.