Advertisement

ಕೊಲ್ಲೂರು ಹೆದ್ದಾರಿಯುದ್ದಕ್ಕೂ ಹೊಂಡಗುಂಡಿ

10:10 PM Oct 13, 2019 | Sriram |

ಕೊಲ್ಲೂರು: ತೀರ್ಥ ಕ್ಷೇತ್ರ ಕೊಲ್ಲೂರು ಹಾಗೂ ಸಿಗಂಧೂರು ಸಂಪರ್ಕಿಸುವ ಪ್ರಮುಖ ರಸ್ತೆ ದುರಸ್ತಿಯಿಲ್ಲದೇ ಅನಾಥವಾಗಿದೆ. ರಾ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಪರಸ್ಪರ ಬೆರಳು ತೋರಿಸುತ್ತಾ ಅಭಿವೃದ್ಧಿಯ ಜವಾಬ್ದಾರಿಯಿಂದ ನುಣುಚಿಕೊಳುತ್ತಿದ್ದಾರೆ. ವರ್ಷ ವೊಂದಕ್ಕೆ ಅಸಂಖ್ಯ ಯಾತ್ರಿಕರು ಬರುವ ಈ ಕ್ಷೇತ್ರಗಳ ಸಂಪರ್ಕ ಕಲ್ಪಿಸುವ ರಸ್ತೆ ಹೊಂಡಗುಂಡಿಗಳಿಂದ ಆವೃತ ವಾಗಿದ್ದು ಕನಿಷ್ಠ ತೇಪೆ ಹಚ್ಚುವ ಕಾರ್ಯವು ನಡೆಯದೇ ದೂರದೂರದಿಂದ ಬರುವ ಯಾತ್ರಿಕರ ಹಿಡಿಶಾಪಕ್ಕೆ ಗುರಿಯಾಗಿದೆ.

Advertisement

ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ರಾ.ಹೆದ್ದಾರಿಯ ಮುಖ್ಯ ರಸ್ತೆಯು ಸಂಪೂರ್ಣ ವಾಗಿ ಹದಗೆಟ್ಟಿದ್ದು ವಾಹನ ಚಾಲಕರು ಸರ್ಕಸ್‌ ಮಾಡಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ದಿನಂಪ್ರತಿ ನೂರಾರು ಯಾತ್ರಿಕರು ಪ್ರಯಾಣಿ ಸುವ ಈ ಮಾರ್ಗದ ಉದ್ದಗಲಕ್ಕೂ ಹಲವಾರು ಕಡೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ದೇವಲ್ಕುಂದ ಸಹಿತ ವಂಡ್ಸೆ, ಹೊಸೂರು ಮಾರ್ಗದ ತಿರುವಿನಲ್ಲಿ ಅನೇಕ ಕಡೆ ಹೊಂಡಗಳಿಂದ ಕೂಡಿದ್ದು ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದೆ. ಬಹುತೇಕ ಕಡೆ ತಾತ್ಕಾಲಿಕ ನೆಲೆಯಲ್ಲಿ ಮುಚ್ಚಲಾಗಿರುವ ಹೊಂಡಗಳು ಮತ್ತೆ ರಾಡಿ ಎದ್ದಿದ್ದು ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಭಯದ ವಾತಾವರಣದಲ್ಲಿ ಸಾಗಬೇಕಾಗಿದೆ.

ಯಾತ್ರಿಕರಿಗೆ ಕಿರಿಕಿರಿ
ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಕೊಲ್ಲೂರಿಗೆ ನೂರಾರು ವಾಹನಗಳು ಆಗಮಿ ಸುತ್ತಿದೆ. ಆದರೆ ಇಲ್ಲಿಗೆ ಸಾಗುವ ಹಾದಿಯು ಸಂಪೂರ್ಣವಾಗಿ ಹದಗೆಟ್ಟಿದ್ದು ಲಘು ಹಾಗೂ ಘನ ವಾಹನಗಳು ಜಾಗೃತೆಯಿಂದ ಸಾಗಬೇಕಾದ ಸಂದಿಗ್ಧ ಪರಿಸ್ಥಿತಿ ಕಂಡು ಬಂದಿದೆ. ಅನೇಕ ಕಡೆ ತಿರುವಿನಲ್ಲಿ ರಸ್ತೆ ಹದಗೆಟ್ಟಿದ್ದು ಚಾಲಕ ಎಚ್ಚರ ತಪ್ಪಿದಲ್ಲಿ ದುರಂತ ಸಂಭವಿಸುವ ಸಾಧ್ಯತೆ ಇದೆ.

ಅಪಾಯಕಾರಿ ತಿರುವಿನಲ್ಲಿ ತಡೆಬೇಲಿ ಅಗತ್ಯ
ಹಾಲ್ಕಲ್‌ನಿಂದ ಕೊಲ್ಲೂರಿಗೆ ಸಾಗುವ ಮಾರ್ಗವು ಅನೇಕ ತಿರುವುಗಳಿಂದ ಕೂಡಿದೆ. ದೀರ್ಘ‌ ತಿರುವಿನ ಒಂದು ಪಾರ್ಶ್ವದಲ್ಲಿ ತಡೆಬೇಲಿ ನಿರ್ಮಾಣದ ಅಗತ್ಯತೆ ಇದೆ.
ಅಮಿತವೇಗದಿಂದ ಆಗಮಿಸುವ ವಾಹನಗಳು ಆಯತಪ್ಪಿ ಆಕಸ್ಮಿಕವಾಗಿ ಎಡಕ್ಕೆ ಸರಿದರೆ ಬಾರಿ ಗಾತ್ರದ ಹೊಂಡಕ್ಕೆ ಬಿದ್ದು ಸಾವನ್ನಪ್ಪುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಾಗಾಗಿ ಈ ಮಾರ್ಗದಲ್ಲಿ ಸಾಗುವ ವಾಹನಗಳ ಸುರಕ್ಷೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಿಂದ ಅಪಘಾತ ತಡೆಬೇಲಿ ನಿರ್ಮಿಸಬೇಕಾಗಿದೆ.

Advertisement

ಸುಗಮ ವಾಹನ ಸಂಚಾರಕ್ಕೆ ಪೂರಕವಾದ ವ್ಯವಸ್ಥೆ
ಹೆಮ್ಮಾಡಿಯಿಂದ ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಮುಖ್ಯರಸ್ತೆಯ ಡಾಮರು ಕಾಮಗಾರಿಗಾಗಿ ಕೂಡಲೇ ಕ್ರಮಕೈಗೊಳ್ಳಲಾಗುವುದು. ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ದೊರಕಿದ್ದು 18 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಭಕ್ತರಿಗೆ ಸುಗಮ ವಾಹನ ಸಂಚಾರಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಮ್ಮಾಡಿಯಿಂದ ಕೊಲ್ಲೂರು ತನಕ ವಿಸ್ತರಣೆಗೊಂಡ ಸಂಪೂರ್ಣ ಡಾಮರು ರಸ್ತೆ ನಿರ್ಮಾಣಗೊಳ್ಳಲಿದ್ದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು
ಬೈಂದೂರು ವಿಧಾನಸಭಾ ಕ್ಷೇತ್ರ

ಶೀಘ್ರ ಕಾಮಗಾರಿ
ರಾಜ್ಯ ಹೆದ್ದಾರಿ ಅಭಿವೃದ್ಧಿ ಬೋರ್ಡಿನಡಿ ಹೆಮ್ಮಾಡಿಯಿಂದ ನೆಂಪು ಜಂಕ್ಷನ್‌ ಹಾಗೂ ಇಡೂರು ಕುಂಜ್ಞಾಡಿವರೆಗಿನ ರಸ್ತೆಯ ಡಾಮರು ಕಾಮಗಾರಿಗೆ 18 ಕೋಟಿ ರೂ. ಬಿಡುಗಡೆಯಾಗಿದೆ. 7 ಮೀ. ವಿಸ್ತರಣೆಯೊಂದಿಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.
-ಮಂಜುನಾಥ, ಜೆಇ, ಲೋಕೋಪಯೋಗಿ ಇಲಾಖೆ

ಸೂಚನಾ ಫಲಕದ ಕೊರತೆ
ಕೊಲ್ಲೂರಿಗೆ ದೇಶದ ನಾನಾ ಕಡೆಗಳಿಂದ ಯಾತ್ರಿಕರು ಆಗಮಿಸುತ್ತಿರುವುದರಿಂದ ಆಯ್ದ ಪ್ರದೇಶಗಳಲ್ಲಿ ಸೂಚನಾ ಫಲಕ ಹಾಗೂ ಕ್ರಮಿಸಬೇಕಾದ ದೂರದ ಮಾಹಿತಿಯನ್ನು ಒದಗಿಸಬೇಕಾಗಿದ್ದು ಹಲವು ತಿರುವುಗಳ ಮುಖ್ಯ ದ್ವಾರದಲ್ಲಿ ಸೂಚನಾ ಫಲಕ ಅಳವಡಿಸಿದಲ್ಲಿ ಪ್ರಯಾಣಿಕರಿಗೆ ಎದುರಾಗುವ ಗೊಂದಲ ನಿವಾರಣೆಯಾಗುವುದು. ಅರಣ್ಯ ಪ್ರದೇಶಗಳ ನಡುವೆ ಹಾದುಹೋಗುವ ಕೊಲ್ಲೂರು ಮುಖ್ಯ ರಸ್ತೆಯ ಅನೇಕ ಕಡೆಗಳಲ್ಲಿ ಪ್ರಯಾಣಿಕರಿಗೆ ದಿಕ್ಕುತಪ್ಪುವ ಅವಕಾಶವಿದೆ. ಹಾಗಾಗಿ ನೆಂಪು, ಮಾರಣಕಟ್ಟೆ, ಜಡ್ಕಲ್‌ ಸಹಿತ ಹಾಲ್ಕಲ್‌ ಪರಿಸರದಲ್ಲಿ ಸೂಚನಾ ಫಲಕ ಅಳವಡಿಸುವುದು ಸೂಕ್ತ.

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next