Advertisement
ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕೆ ಉಡುಪಿ, ಮಂಗಳೂರು ಜಿಲ್ಲೆಯಿಂದ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಬಸ್ ನಿಲ್ದಾಣ, ದೇಗುಲ ಹಾಗೂ ಮುಖ್ಯ ರಸ್ತೆಯು ಸದಾ ಜನಸಂದಣಿಯಿಂದ ಕೂಡಿರುತ್ತಿತ್ತು. ಆದರೆ ಇದೀಗ ಬಸ್ ಸಂಚಾರಕ್ಕೆ ಅನುಮತಿ ದೊರೆತಿದ್ದರೂ ಭಕ್ತರ ಆಗಮನದ ಕೊರತೆಯಿಂದ ಆರ್ಥಿಕ ಹೊಡೆತ ಬೀಳಬಹುದೆಂಬ ಅಂಜಿಕೆಯಿಂದ ಅನೇಕ ಬಸ್ ಮಾಲಕರು ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಪ್ರತಿ ದಿನ 80ಕ್ಕೂ ಮಿಕ್ಕಿ ಸಂಚಾರವಿರುವ ನಿಲ್ದಾಣದಲ್ಲಿ ಈಗ ಬೆರಳೆಣಿಕೆಯ ಬಸ್‌ಗಳು ಮಾತ್ರ ಸಂಚರಿಸುತ್ತಿದೆ.
ಪ್ರವಾಸಿಗರನ್ನೇ ಅವಲಂಬಿಸಿರುವ ಕೊಲ್ಲೂರು ಎರಡು ತಿಂಗಳಿಂದೀಚೆ ಜನ ಸಂಚಾರ ಇಲ್ಲದೆ ಸಂಪೂರ್ಣ ಕರ್ಫ್ಯೂ ಹೇರಿದಂತಿದೆ.ದೇಗುಲವು ಜೂ.7ರ ವರೆಗೆ ಮುಚ್ಚಿರುವುದರಿಂದ ಸ್ಥಳೀಯರೂ ಕೂಡ ಕೊರೊನ ವೈರಸ್ ಭೀತಿಯಿಂದ ಅಗತ್ಯಕ್ಕಷ್ಟೇ ಪೇಟೆಗೆ ಬರುವ ಪರಿಪಾಠ ಹೊಂದಿದ್ದಾರೆ. ಕೊಲ್ಲೂರು ಒಂದು ರೀತಿಯ ನಿರ್ಜನ ಪ್ರದೇಶವಾಗಿ ಕಂಡುಬರುತ್ತಿದೆ.