Advertisement

ಕೊಲ್ಲೂರು: ಕಳವು ನಡೆದು 2 ವರ್ಷವಾದರೂ ಪತ್ತೆಯಾಗದ ಆಭರಣ

06:55 AM May 14, 2018 | |

ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಿಯ ಲಕ್ಷಾಂತರ ರೂ. ಬೆಲೆಬಾಳುವ ಆಭರಣಗಳನ್ನು ಕದ್ದ ಪ್ರಕರಣ ಕಳೆದು ಇದೀಗ 2 ವರ್ಷ ಕಳೆದಿದೆ. 

Advertisement

ಕದ್ದ ಚಿನ್ನದಲ್ಲಿ ಸುಮಾರು 2.289 ಕೇಜಿ ಚಿನ್ನಾಭರಣಗಳನ್ನು 2016 ಆ. 1ರಂದು ಪೊಲೀಸರು ವಾಪಸ್‌ ಹಸ್ತಾಂತರಿಸಿದ್ದರೂ, ಇನ್ನೂ 400 ಗ್ರಾಂ ಚಿನ್ನಾಭರಣ ಪತ್ತೆಯೇ ಆಗಿಲ್ಲ.
 
ಕಳವಾದ ಸುಮಾರು 75 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳ ಬಗ್ಗೆ ಅಂದಿನ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ಅಂದಿನ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸುದರ್ಶನ್‌, ಎಸ್‌.ಐ. ಶೇಖರ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. 

ನೌಕರನೇ ಕಳವು ನಡೆಸಿದ್ದ! 
ಅಂದಿನ ದೇಗುಲದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್‌. ಉಮಾ ನಿತ್ಯ ಸಂಗ್ರಹವಾದ ಕಾಣಿಕೆ, ಹರಿಕೆ ಆಭರಣಗಳ ಬಗ್ಗೆ ಲೆಕ್ಕಪರಿಶೋಧನೆ ಮಾಡುತ್ತಿದ್ದಾಗ ಅದರಲ್ಲಿ ವ್ಯತ್ಯಾಸವನ್ನು ಕಂಡುಹಿಡಿದಿದ್ದರು. ಈ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದ  ಶಿವರಾಮ ಮಡಿವಾಳ ಎಂಬಾತನನ್ನು ಸಂಪರ್ಕಿಸಿದ್ದರು. ಆತ ನೀಡಿದ ಉತ್ತರ ನೀಡಲು ಅಸಮರ್ಥನಾದ್ದರಿಂದ ಅವರು ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರಿಗೆ ಶರಣಾದ ಶಿವರಾಮ್‌ ತಾನು ಬ್ಯಾಂಕ್‌ ಇನ್ನಿತರ ಲೇವಾದೇವಿ ಸಂಸ್ಥೆಗಳಲ್ಲಿ ಚಿನ್ನಾಭರಣ ಅಡವಿಟ್ಟ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದ. ಆತನೊಡನೆ ದೇಗುಲದ ಇತರ 4 ಮಂದಿ ಸಿಬಂದಿಯನ್ನೂ ಪೊಲೀಸರು ಬಂಧಿಸಿದ್ದರು. ಜತೆಗೆ ಕಾರ್ಯನಿರ್ವಹಣಾಧಿಕಾರಿ ಎಲ್‌.ಎಸ್‌. ಮಾರುತಿ ಅವರನ್ನೂ ಬಂಧಿಸಲಾಗಿದ್ದು, ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ದೇವಿಯ ಆಭರಣ ಕಳವು ಪ್ರಕರಣ ವ್ಯಾಪಕ ಸುದ್ದಿಮಾಡಿತ್ತು. 

ಎರಡು ವರ್ಷವಾದರೂ ಚಾರ್ಜ್‌ ಶೀಟ್‌ ಇಲ್ಲ!
ಪ್ರಕರಣ ನಡೆದು 2 ವರ್ಷಗಳೇ ಕಳೆದರೂ ಪೊಲೀಸರು ಇನ್ನೂ ಆರೋಪಿಗಳ ಮೇಲೆ ಚಾರ್ಜ್‌ ಶೀಟ್‌ ಹಾಕಿಲ್ಲ. ಐಷಾರಾಮಿ ಜೀವನ ನಡೆಸುತ್ತಿದ್ದ ದೇಗುಲ ನೌಕರನೇ ಈ ವಿಚಾರದಲ್ಲಿ ಆರೋಪ ಹೊತ್ತಿದ್ದರೂ, ಪೊಲೀಸರು ಚಾರ್ಚ್‌ ಶೀಟ್‌ ಹಾಕದಿರುವುದು ನಾನಾ ಪ್ರಶ್ನೆಗಳಿಗೆ ಎಡೆಮಾಡಿದೆ.

ರಶೀದಿ ವ್ಯವಸ್ಥೆ ಇಲ್ಲ 
ದೇಗುಲದಲ್ಲೀಗ ಕಾಣಿಕೆ ರೂಪದಲ್ಲಿ ಚಿನ್ನಾಭರಣ ಸಮರ್ಪಿಸಲು ಬರುವ ಭಕ್ತರಿಗೆ ರಶೀದಿ ನೀಡುವ ವ್ಯವಸ್ಥೆಯೂ ಮಾಯವಾಗಿದೆ. ಇದರ ಬದಲಿಗೆ ದೇಗುಲ ಸಿಬಂದಿ ಕಾಣಿಕೆ ಹುಂಡಿಗೆ ಹಾಕುವಂತೆ ಹೇಳುತ್ತಿರುವುದು ಭಕ್ತರಿಗೆ ಕಿರಿಕಿರಿ ಉಂಟುಮಾಡಿದೆ.

Advertisement

400 ಗ್ರಾಂ ಚಿನ್ನಾಭರಣ ಎಲ್ಲಿ ಹೋಯಿತು?
ಎಸ್‌.ಪಿ ಅಣ್ಣಾಮಲೈ ನೇತೃತ್ವದಲ್ಲಿ ಪ್ರಕರಣ ತನಿಖೆ ನಡೆದಿದ್ದು, ಅವರ ವರ್ಗಾವಣೆ ಬಳಿಕ ತನಿಖೆ ವೇಗಪಡೆಯಲಿಲ್ಲ. ಊರ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಮಿಕ್ಕುಳಿದ ಚಿನ್ನಾಭರಣಗಳ ಬಗ್ಗೆ ಧ್ವನಿ ಎತ್ತಿದ್ದರೂ ಆ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿದೆ.

ಮಾಹಿತಿ ಸಂಗ್ರಹಿಸಿ ಚಾರ್ಚ್‌ಶೀಟ್‌
ಚುನಾವಣೆಯ ಒತ್ತಡದಿಂದಾಗಿ ಕೊಲ್ಲೂರು ದೇಗುಲದ ಚಿನ್ನಾಭರಣ ಕಳವು ಪ್ರಕರಣದ ಚಾರ್ಚ್‌ಶೀಟ್‌ ಹಾಕಲು ವಿಳಂಬವಾಗಿದೆ. ಹೊಸತಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಅಲ್ಲಿನ ಕಳವು ಪ್ರಕರಣದ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಚಾರ್ಚ್‌ಶೀಟ್‌ ಹಾಕಲಾಗುವುದು.

– ದಿನೇಶ್‌ ಕುಮಾರ್‌,  ಡಿವೈಎಸ್‌ಪಿ

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next