Advertisement

ಕೋಲ್ಕತಾದ ಹಿರಿಯ ದಂಪತಿಯ ಫ‌ುಟ್‌ಬಾಲ್‌ ಪ್ರೀತಿ!

06:00 AM Jun 02, 2018 | Team Udayavani |

ಕೋಲ್ಕತಾ: ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ “ಸಾಕರ್‌ ಕ್ರೇಜಿ’ ಕೋಲ್ಕತಾ ಮೈ ಕೊಡವಿಕೊಂಡು ನಿಂತಿದೆ. ಜೂ. 14ರಿಂದ ಮಾಸ್ಕೋದಲ್ಲಿ ಆರಂಭವಾಗಲಿ ರುವ ಕಾಲ್ಚೆಂಡಿನ ಕಾದಾಟವನ್ನು ಕಾಣಲು ಕಾತರಗೊಂಡಿದೆ. 

Advertisement

ಆದರೆ ಈ ಮಹಾನಗರಿಯ ಪನ್ನಾಲಾಲ್‌-ಚೈತಾಲಿ ಚಟರ್ಜಿ ದಂಪತಿ ಎಲ್ಲರಿಗಿಂತ ಮುಂದಿದ್ದು, ಫಿಫಾ ವಿಶ್ವಕಪ್‌ ವೀಕ್ಷಿಸಲು ನೇರವಾಗಿ ಮಾಸ್ಕೋಗೇ ವಿಮಾನವೇರಲಿದ್ದಾರೆ. ಇದರಲ್ಲಿ ಎರಡು ವಿಶೇಷಗಳಿವೆ; ಒಂದು, ಇದು ಈ ದಂಪತಿ ಖುದ್ದಾಗಿ ಫ‌ುಟ್‌ಬಾಲ್‌ ವಿಶ್ವಕಪ್‌ ಆತಿಥ್ಯದ ನಾಡಿಗೆ ತೆರಳಿ ವೀಕ್ಷಿಸಲಿರುವ 10ನೇ ಪಂದ್ಯಾವಳಿ. ಇನ್ನೊಂದು, ಇವರಿಬ್ಬರ ವಯಸ್ಸು. ಪನ್ನಾಲಾಲ್‌ ಅವರಿಗೀಗ 85ರ ಹರೆಯ. ಪತ್ನಿ ಚೈತಾಲಿ ವಯಸ್ಸು 76 ವರ್ಷ! ಕ್ರೀಡಾ ರೋಮಾಂಚನವನ್ನು ಸವಿಯಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.

ತಾವೇ ಪ್ರತಿನಿಧಿಸಿದ “ಕಸ್ಟಮ್‌ ಕ್ಲಬ್‌ ಫ‌ುಟ್‌ಬಾಲರ್’ ತಂಡದ 7 ಮಂದಿ ಮಾಜಿ ಆಟಗಾರರೊಂದಿಗೆ ಇವರು ಜೂ. 14ರಂದು ರಶ್ಯಕ್ಕೆ ತೆರಳಲಿದ್ದು, ಜೂ. 28ಕ್ಕೆ ವಾಪಸಾಗಲಿ ದ್ದಾರೆ. ನಾಕೌಟ್‌ ಪಂದ್ಯಗಳ ಟಿಕೆಟ್‌ ಲಭಿಸಿದರೆ ಉಳಿಯುವ ಯೋಜನೆ ಹಾಕಿಕೊಂಡಿದ್ದಾರೆ. ಸದ್ಯ ಇವರಿಗೆ 3 ಪಂದ್ಯಗಳ ಟಿಕೆಟ್‌ ಮಾತ್ರ ಲಭಿಸಿದ್ದು, ಹೆಚ್ಚಿನ ಪಂದ್ಯಗಳ ಟಿಕೆಟ್‌ಗಳಿಗಾಗಿ ರಶ್ಯ ರಾಯಭಾರ ಕಚೇರಿ ಹಾಗೂ ಫಿಫಾ ಸಂಘಟನಾ ಸಮಿತಿಗೆ ಮನವಿ ಮಾಡಿದ್ದಾರೆ. ಆದರೆ ಈ ವರೆಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.

ವಿಶಿಷ್ಟ, ವಿಸ್ಮಯ, ದೇವರ ದಯೆ!
ಇವರ ಪ್ರತಿಯೊಂದು ವಿಶ್ವಕಪ್‌ ಪಯಣವೂ ವಿಶಿಷ್ಟ, ವಿಸ್ಮಯ. “ಹ್ಯಾಂಡ್‌ ಆಫ್ ಗಾಡ್‌’ ಖ್ಯಾತಿಯ ಡೀಗೋ ಮರಡೋನಾ ಆಟವನ್ನು ಹತ್ತಿರ ದಿಂದ ವೀಕ್ಷಿಸಿದ್ದು, ಪೀಲೆ ಜತೆ ಫೋಟೊ ತೆಗೆಸಿಕೊಂಡದ್ದೆಲ್ಲ ತಮ್ಮ ಈ ಜರ್ನಿಯ ಸ್ಮರಣೀಯ ಅನುಭವ ಗಳಾಗಿವೆ ಎನ್ನುತ್ತಾರೆ ಚೈತಾಲಿ. ಇತ್ತೀಚೆಗೆ ಕೋಲ್ಕತಾದಲ್ಲೇ ನಡೆದ ಅಂಡರ್‌-17 ವಿಶ್ವಕಪ್‌ ವೇಳೆ ಫಿಫಾ ತಮಗೆ ನೀಡಿದ ಆತಿಥ್ಯವನ್ನೂ ಇವರು ಖುಷಿಯಿಂದ ಹೇಳಿಕೊಳ್ಳುತ್ತಾರೆ. 
“1982ರ ಸ್ಪೇನ್‌ ಪಯಣಕ್ಕೆ ದೇವರ ದಯೆಯೇ ಕಾರಣ’ ಎಂಬುದು ಇವರ ನಂಬಿಕೆ. ಯುವಕರನ್ನೂ ನಾಚಿಸುವ ಇವರ ಫ‌ುಟ್‌ಬಾಲ್‌ ಪ್ರೀತಿಗೊಂದು ಸಲಾಂ!

1982: ಮೊದಲ ಪಯಣ
1982ರಲ್ಲಿ ಮೊದಲ ಬಾರಿಗೆ ಕೋಲ್ಕತಾದಲ್ಲಿ ವಿಶ್ವಕಪ್‌ ಫ‌ುಟ್‌ಬಾಲ್‌ ನೇರ ಪ್ರಸಾರ ಮೂಡಿಬಂದಿತ್ತು. ಅಂದಿನ ಪಂದ್ಯಾವಳಿಯ ತಾಣ ಸ್ಪೇನ್‌. ಆದರೆ ಆಗಲೇ ಪನ್ನಾಲಾಲ್‌-ಚೈತಾಲಿ ಕೋಲ್ಕತಾದಲ್ಲಿದ್ದು ಇದನ್ನು ವೀಕ್ಷಿಸುವ ಬದಲು ನೇರವಾಗಿ ಸ್ಪೇನ್‌ಗೆ ವಿಮಾನ ಏರಿದ್ದರು! ಅಂದಿನಿಂದ ಮೊದಲ್ಗೊಂಡ ಅವರ ವಿಶ್ವಕಪ್‌ ಪಯಣ 36 ವರ್ಷಗಳ ಬಳಿಕವೂ ಮುಂದುವರಿದಿದೆ. ಸಾಧ್ಯವಾದರೆ 2022ರ ಕತಾರ್‌ ವಿಶ್ವಕಪ್‌ ಪಂದ್ಯಾವಳಿಯನ್ನೂ ಸ್ಟೇಡಿಯಂನಲ್ಲಿದ್ದು ಕಾಣುವ ಹಂಬಲ ಇವರದು!

Advertisement

ಬಹುಶಃ ಇದೇ ನನ್ನ ಕೊನೆಯ ವಿಶ್ವಕಪ್‌ ಪಯಣವಾಗಬಹುದು. 2022ರ ಪಂದ್ಯಾವಳಿಯ ವೇಳೆ ನಾನು 90ಕ್ಕೆ ಹತ್ತಿರವಾಗುತ್ತೇನೆ. ಹೀಗಾಗಿ ಕತಾರ್‌ಗೆ ತೆರಳಿ ವಿಶ್ವಕಪ್‌ ವೀಕ್ಷಿಸುವ ಸಣ್ಣದೊಂದು ಭರವಸೆ ಮಾತ್ರ ಉಳಿದಿದೆ.
ಪನ್ನಾಲಾಲ್‌

Advertisement

Udayavani is now on Telegram. Click here to join our channel and stay updated with the latest news.

Next