ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಇದೇ ಜುಲೈ 5 ರಂದು ತೆರೆಗೆ ಅಪ್ಪಳಿಸಲಿದೆ. ಕನ್ನಡದ ಜೊತೆಗೆ ತಮಿಳು ಭಾಷೆಯಲ್ಲೂ “ದೇವಕಿ’ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣ ಆಗಿರುವ ಈ ಚಿತ್ರ ಕೊಲ್ಕತ್ತಾದಲ್ಲೇ ಸೌಂಡ್ ಎಫೆಕ್ಟ್ಸ್ ಪೂರ್ಣಗೊಳಿಸಿದೆ. ಅದರಲ್ಲೂ ಕೊಲ್ಕತ್ತಾದಲ್ಲಿ ಸೌಂಡ್ ಎಫೆಕ್ಟ್ಸ್ ಆಗಿರುವ ಕನ್ನಡದ ಮೊದಲ ಚಿತ್ರ ಎಂಬುದು ನಿರ್ದೇಶಕರ ಹೇಳಿಕೆ.
ಇವೆಲ್ಲದರ ಜೊತೆಗೆ ಚಿತ್ರಕ್ಕೆ ಲೈವ್ ಸೌಂಡ್ ಮಿಕ್ಸಿಂಗ್ ಕೂಡ ವಿಶೇಷವಾಗಿದ್ದು, ಈಗಾಗಲೇ “ಕಬಾಲಿ’, “ವಿಸಾರಣೈ’, “ವಡಚನ್ನೈ’, “ವಿಶ್ವಾಸಂ’ ಹಾಗು ಇತ್ತೀಚೆಗೆ ಟ್ರೇಲರ್‌ನಲ್ಲೇ ಜೋರು ಸದ್ದು ಮಾಡಿರುವ “ಸಾಹೋ’ ಚಿತ್ರಕ್ಕೆ ಅಟ್‌ಮಾಸ್ ಮಿಕ್ಸಿಂಗ್ ಮಾಡಿರುವ ಎಂಜಿನಿಯರ್ ಉದಯ್‌ಕುಮಾರ್ ಅರು “ದೇವಕಿ’ ಚಿತ್ರಕ್ಕೆ ಸೌಂಡ್ ಮಿಕ್ಸಿಂಗ್ ಮಾಡಿದ್ದಾರೆ.
“ದೇವಕಿ’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಪ್ರೇಕ್ಷಕರಿಗೆ ನೈಜ ಅನುಭವ ಆಗುವ ರೀತಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕರ ಹೇಳಿಕೆ. ಇಲ್ಲಿ ಬೆಂಗಾಲಿ ಭಾಷೆಯನ್ನೂ ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಅದಕ್ಕೆ ಕಾರಣ, ಇಡೀ ಚಿತ್ರದ ಕಥೆ ಕೊಲ್ಕತ್ತಾದಲ್ಲೇ ಸಾಗುವುದರಿಂದ ಅಲ್ಲಿನ ನೈಜತೆಯನ್ನು ಹಾಗೆಯೇ ಉಳಿಸಿಕೊಂಡು, ಹೊಸ ಅನುಭವ ಕೊಡುವ ಕೆಲಸ ಮಾಡಲಾಗಿದೆ.
ಸುಮಾರು 300 ಕ್ಕೂ ಹೆಚ್ಚು ಮಂದಿ ಸ್ಥಳೀಯ ಕಲಾವಿದರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅದರಲ್ಲೂ ಶೇ.40 ರಷ್ಟು ಮಂದಿ ಬೆಂಗಾಲಿ ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿರುವುದು ಹೈಲೈಟ್ ಎನ್ನುವ ನಿರ್ದೇಶಕ ಲೋಹಿತ್, ಚಿತ್ರದಲ್ಲಿ ಇದೇ ಮೊದಲ ಸಲ ಪ್ರಿಯಾಂಕ ಉಪೇಂದ್ರ ಅವರ ಪುತ್ರಿ ಐಶ್ವರ್ಯಾ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.
ಕಿಶೋರ್ ಕೂಡ ಚಿತ್ರದಲ್ಲಿ ಕೊಲ್ಕತ್ತಾ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವೇಣು ಛಾಯಾಗ್ರಹಣವಿದೆ. ನೊಬಿನ್ ಪಾಲ್ ಸಂಗೀತವಿದೆ. ರವಿಚಂದ್ರ ಅವರ ಸಂಕಲನವಿದೆ. ರವಿವರ್ಮ ಸಾಹಸ ಮಾಡಿದ್ದಾರೆ. ಚಿತ್ರವನ್ನು ರವೀಶ್ ಮತ್ತು ಅಕ್ಷಯ್ ನಿರ್ಮಾಣ ಮಾಡಿದ್ದಾರೆ. ಗುರುಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದೆ.