ಕೋಲ್ಕತ್ತಾ: ಸಲಿಂಗ ವಿವಾಹದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಸದ್ಯ ವಿಚಾರಣೆ ನಡೆಯುತ್ತಿದೆ. ಸಲಿಂಗ ವಿವಾಹದ ಹಕ್ಕಿನ ಬಗ್ಗೆ ವಿಚಾರಣೆ ನಡೆಯುತ್ತಿರುವಾಗಲೇ ಸೋಮವಾರ(ಮೇ.22 ರಂದು) ಸಲಿಂಗಿ ಜೋಡಿಯೊಂದು ವಿವಾಹವಾಗಿದೆ.
ಶೋವಾಬಜಾರ್‌ನಲ್ಲಿರುವ ಕೋಲ್ಕತ್ತಾದ ಅರಿಟೋಲಾ ಪ್ರದೇಶದಲ್ಲಿ ಭೂತನಾಥ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ, ಬಂಗಾಳಿ ಆಚರಣೆಯೊಂದಿಗೆ ಸಲಿಂಗಿ ಜೋಡಿ ಮೌಸುಮಿ ದತ್ತಾ ಮತ್ತು ಮೌಮಿತಾ ಮಜುಂದಾರ್ ವಿವಾಹವಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಯವಾದ ಮೌಸುಮಿ ದತ್ತಾ ಮತ್ತು ಮೌಮಿತಾ ಮಜುಂದಾರ್ ಡೇಟಿಂಗ್ ಮಾಡಿ, ಪ್ರೀತಿಸಲು ತೊಡಗಿದ್ದಾರೆ. ತಮ್ಮ ಮದುವೆಯನ್ನು ಹೆಚ್ಚು ಬಹಿರಂಗಪಡಿಸದೆ ಮಧ್ಯರಾತ್ರಿ ದೇವಾಲಯದಲ್ಲಿ ಹಾರವನ್ನು ಬದಲಾಯಿಸಿಕೊಂಡು, ಹಣೆಗೆ ಸಿಂಧೂರವನ್ನಿಟ್ಟು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಲಿಂಗಿ ಸಮುದಾಯಕ್ಕೆ ಇದು ಮಾದರಿ ಆಗಬೇಕೆನ್ನುವ ನಿಟ್ಟಿನಲ್ಲಿ ಮದುವೆಯ ಫೋಟೋಗಳನ್ನು ಜೋಡಿ ಹಂಚಿಕೊಂಡಿದೆ.
ಇದನ್ನೂ ಓದಿ: Historic Sengol;ನೂತನ ಸಂಸತ್ ಭವನದಲ್ಲಿ ರಾಜದಂಡ ಸ್ಥಾಪನೆ… ಸೆಂಗೋಲ್ ಹಿಂದಿನ ಇತಿಹಾಸವೇನು?
ಸಾಮಾಜಿಕ ನಿಷೇಧಗಳಿಗೆ ಒಳಪಟ್ಟರೆ ಅವರು ಅದನ್ನು ಹೇಗೆ ಎದುರಿಸುತ್ತಾರೆ ಎಂದು ಕೇಳಿದಾಗ, “ಪ್ರೀತಿ ಇರುವಲ್ಲಿ ತಾರತಮ್ಯ ಇರಬಾರದು. ಇದು ಸಮಾಜಕ್ಕೆ ಸಂಬಂಧಿಸಿದ್ದಲ್ಲ. ಅವರು ಹೇಗೆ ಸಂತೋಷವಾಗಿರುತ್ತಾರೆ ಮತ್ತು ಯಾರೊಂದಿಗೆ ತಮ್ಮ ಜೀವನವನ್ನು ಕಳೆಯಲು ಬಯಸುತ್ತಾರೆ ಎಂಬುದರ ಕುರಿತು ಒಬ್ಬರು ಯೋಚಿಸಬೇಕು”ಎಂದು ಮೌಸುಮಿ ಹೇಳಿದರು.
ತಮ್ಮ ಸಂಗಾತಿಯ ಕುಟುಂಬವು ಅವರನ್ನು ಸ್ವೀಕರಿಸುತ್ತದೆ ಮತ್ತು ಅದಕ್ಕೆ ಬೆಂಬಲವನ್ನು ನೀಡುತ್ತದೆ ಎಂದು ಮೌಸುಮಿ ಭಾವಿಸುತ್ತಾರೆ.
ಸದ್ಯ ಬಾಡಿಗೆಯ ಅಪಾರ್ಟ್ ಮೆಂಟ್ ನಲ್ಲಿ ಜೋಡಿ ವಾಸಿಸುತ್ತಿದ್ದು, ಶೀಘ್ರದಲ್ಲಿ ಊರಿನಿಂದ ದೂರದ ಪ್ರದೇಶಕ್ಕೆ ಪ್ರವಾಸಕ್ಕೆ ಹೊರಡಿಲಿದ್ದಾರೆ ಎಂದು ಜೋಡಿ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಮೂರನೇ ಸಲಿಂಗಿ ವಿವಾಹ ಇದಾಗಿದೆ. 2018ರಲ್ಲಿ ಸುಚಂದ್ರ ದಾಸ್ ಮತ್ತು ಶ್ರೀ ಮುಖರ್ಜಿ ವಿವಾಹವಾಗಿದ್ದರು. ಆ ಬಳಿಕ ಚೈತನ್ಯ ಶರ್ಮಾ ಮತ್ತು ಅಭಿಷೇಕ್ ರೇ ಅವರು ವಿವಾಹವಾಗಿದ್ದರು.